ಬಿಜೆಪಿ 5ನೇ ಪಟ್ಟಿ ಬಿಡುಗಡೆ – ಕರ್ನಾಟಕ ಸೇರಿ 8 ರಾಜ್ಯಗಳ 111 ಅಭ್ಯರ್ಥಿ ಲಿಸ್ಟ್ ಇಲ್ಲಿದೆ

ಬೆಂಗಳೂರು: ಬಿಜೆಪಿ ಐದನೇ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದ್ದು, ಕರ್ನಾಟಕವೂ ಸೇರಿದಂತೆ ಎಂಟು ರಾಜ್ಯಗಳ ಒಟ್ಟು 111 ಅಭ್ಯರ್ಥಿಗಳ ಹೆಸರನ್ನು ಬಹಿರಂಗಗೊಳಿಸಿದೆ. ಬಿಜೆಪಿಯ ಇಬ್ಬರು “ಫೈರ್ ಬ್ರ್ಯಾಂಡ್” ಎಂದೇ ಖ್ಯಾತರಾಗಿದ್ದ ವರುಣ್ ಗಾಂಧಿ ಮತ್ತು ನಮ್ಮ ರಾಜ್ಯದ ಅನಂತ್‌ಕುಮಾರ ಹೆಗಡೆ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡದೇ ಚುನಾವಣಾ ಕಣದಿಂದ ದೂರ ಸರಿಸಿದಂತಿದೆ.

ಈ ಪೈಕಿ ವರುಣ್ ಗಾಂಧಿ ಅವರ ಬದಲಾಗಿ ಅವರ ತಾಯಿ ಮಾಜಿ ಸಚಿವೆ ಮನೇಕಾ ಗಾಂಧಿಯವರಿಗೆ ಟಿಕೆಟ್ ನೀಡುವ ಮೂಲಕ ಇಂದಿರಾ ಗಾಂಧಿಯವರ ಸೊಸೆಯನ್ನು ಗೆಲ್ಲಿಸಿ ಬಳಿಕ ಮೋದಿ ಸಂಪುಟಕ್ಕೆ ಸೇರಿಸಿಕೊಂಡು ಸೋನಿಯಾ ಗಾಂಧಿ ಕುಟುಂಬಕ್ಕೆ ಸೆಡ್ಡು ಹೊಡೆಯುವ ಪ್ಲಾನ್ ಮಾಡಿದಂತಿದೆ. ಇನ್ನು ಕಳೆದ ನಾಲ್ಕೂವರೆ ವರ್ಷಗಳ ಕಾಲ ನಾಪತ್ತೆಯಾದವರಂತಿದ್ದ ಮತ್ತು ಸಂವಿಧಾನ ತಿದ್ದುಪಡಿ ವಿಚಾರ ಸೇರಿದಂತೆ ವಿವಾದಾತ್ಮಕ ಹೇಳಿಕೆಗಳಿಂದ “ಕಾಂಟ್ವರ್ಸಿ ಲೀಡರ್” ಬಿಜೆಪಿಯ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರಿಗೆ ನಿರೀಕ್ಷೆಯಂತೆ ಟಿಕೆಟ್ ನಿರಾಕರಿಸಲಾಗಿದ್ದು, ಕರಾವಳಿ ಭಾಗದ ಮತ್ತೋರ್ವ ಸಭ್ಯ ರಾಜಕಾರಣಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಉತ್ತರ ಕನ್ನಡದ ಅಭ್ಯರ್ಥಿಯನ್ನಾಗಿ ಮಾಡಿ ಟಿಕೆಟ್ ನೀಡಲಾಗಿದೆ.

ಈ ಸಲ ತಮಗೆ ಟಿಕೆಟ್ ಮಿಸ್ ಆಗೋದು ಗ್ಯಾರಂಟಿ ಎಂಬುದನ್ನರಿತಂತಿದ್ದ ಅನಂತಕುಮಾರ ಹೆಗಡೆಯವರು ಕಳೆದ ಒಂದು ವಾರದಿಂದಲೇ ತಮ್ಮ ಪ್ರಚಾರವನ್ನು ನಿಲ್ಲಿಸಿ ಮನೆಯೊಳಗೆ ಕೂತಿದ್ದುದು ಕಂಡು ಅಲ್ಲಿನ ಬಹುತೇಕರಿಗೆ ಆಶ್ಚರ್ಯ ಉಂಟು ಮಾಡಿತ್ತು. ಇನ್ನು, ಬೆಳಗಾವಿಯಲ್ಲಿ ಸ್ಥಳೀಯ ಮುಖಂಡರ ವಿರೋಧದ ನಡುವೆಯೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಕೊನೆಗೂ ಟಿಕೆಟ್ ಸಿಕ್ಕಿದ್ದು ಲಕ್ ಅಂತಾನೇ ಹೇಳಬೇಕು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಮಹೇಶ್ ತೆಂಗಿನಕಾಯಿ ಸೇರಿದಂತೆ ಮತ್ತಿತರರು ಹೊರಗಿನಿಂದ ಬಂದ ಜಗದೀಶ್ ಶೆಟ್ಟರ್ ಗೆ ಟಿಕೆಟ್ ನೀಡಿದರೆ ಈ ಬಾರಿಯ ಚುನಾವಣೆಯಲ್ಲಿ ಅವರನ್ನು ನಾವೇ ಸೋಲಿಸುತ್ತೇವೆ ಅಂತಾ ನೇರವಾಗಿ ಬೆಂಗಳೂರಿಗೆ ಬಂದು ಬಿಜೆಪಿ ವರಿಷ್ಠರಿಗೆ ಬೆದರಿಕೆ ಹಾಕಿ ಹೋಗಿದ್ದರು.

ಅದರೆ, ಜಗದೀಶ್ ಶೆಟ್ಟರ್ ಗೆ ಟಿಕೆಟ್ ಕೊಡಲೇಬೇಕೆಂದು ಮಾಜಿ ಸಿಎಂ ಯಡಿಯೂರಪ್ಪನವರು ದೆಹಲಿ ಬಿಜೆಪಿ ವರಿಷ್ಠರಿಗೆ ಮಾಡಿದ ಒತ್ತಾಯ ಶೆಟ್ಟರ್ ಗೆ ವರವಾಯಿತು! ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರ ಹೆಸರು ಅಂತಿಮವಾಗಿದ್ದು, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಮಗ ಅಲೋಕ್ ವಿಶ್ವನಾಥ್ ಗೆ ಟಿಕೆಟ್ ಸಿಗಲಿಲ್ಲವಾಗಿದೆ. ಅತ್ತ, ರಾಯಚೂರು ಮತಕ್ಷೇತ್ರದ ಟಿಕೆಟ್ ರಾಜಾ ಅಮರೇಶ್ವರ ನಾಯಕ್ ಅವರಿಗೆ ಫಿಕ್ಸ್ ಆಗಿದುದ್ದು, ಅಧಿಕೃತ ಪಟ್ಟಿಯೂ ಹೊರ ಬಿದ್ದಿದೆ. ಆದರೆ, ಎಸ್ಸಿ ಮೀಸಲು ಕ್ಷೇತ್ರವಾದ ಚಿತ್ರದುರ್ಗದ ಅಭ್ಯರ್ಥಿ ಹೆಸರು ಕಾರಣಾಂತರಗಳಿಂದ ಅಂತಿಮಗೊಂಡಿಲ್ಲ.

ಇಲ್ಲಿ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಪ್ರಬಲ ಆಕಾಂಕ್ಷಿಯಾಗಿದ್ದರೆ, ಇವರಿಗೆ ರಘು ಚಂದನ್ ಅವರ ಹೆಸರು ತೊಡಕಾಗಿದೆ ಎನ್ನಲಾಗಿದೆ. ಕರ್ನಾಟಕವನ್ನು ಹೊರತುಪಡಿಸಿ ಗುಜರಾತ್, ಹರಿಯಾಣ, ಬಿಹಾರ, ಹಿಮಾಚಲ ಪ್ರದೇಶ, ಜಾರ್ಖಂಡ್, ಬಿಹಾರ, ಗೋವಾ, ಆಂಧ್ರಪ್ರದೇಶಗಳ ಒಟ್ಟು 111 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ರಾಮ ಮಂದಿರ ನಿರ್ಮಾಣ ಮಾಡಿ ಸೈ ಎನ್ನಿಸಿಕೊಂಡ ಬಿಜೆಪಿ “ರಾಮಾಯಣ” ಧಾರಾವಾಹಿ ಖ್ಯಾತಿಯ ನಟ ಅರುಣ್ ಗೋಯಲ್ ಅವರಿಗೆ ಮತ್ತು ಬಾಲಿವುಡ್ ನ ಮತ್ತೋರ್ವ ಖ್ಯಾತ ನಟಿ ಕಂಗನಾ ರಣಾವತ್ ಅವರಿಗೆ ಈ ಬಾರಿ ಟಿಕೆಟ್ ನೀಡಿರುವುದು ವಿಶೇಷ.

Comments (0)
Add Comment