ಬಿಹಾರದಲ್ಲಿ ದೋಣಿ ಮುಳುಗಿ 18 ಮಂದಿ ನಾಪತ್ತೆ- ಮೂವರು ಮೃತ್ಯು

ಪಾಟ್ನಾ: ದೋಣಿಯೊಂದು ಮುಳುಗಿ ಹದಿನೆಂಟು ಮಂದಿ ನಾಪತ್ತೆಯಾಗಿ ಮೂವರು ಸಾವನ್ನಪ್ಪಿದ ಘಟನೆ ಬಿಹಾರದ ರಾಜಧಾನಿ ಪಾಟ್ನಾ ಸಾರಣ್ ಜಿಲ್ಲೆಯ ಸರಯೂ ನದಿಯಲ್ಲಿ ನಡೆದಿದೆ.

ನದಿಯಲ್ಲಿನ ನೀರಿನ ರಭಸಕ್ಕೆ ದೋಣಿ ಮಗುಚಿ ಬಿದ್ದಾಗ ಸ್ಥಳೀಯರು ಮೂವರನ್ನು ರಕ್ಷಿಸಿದ್ದು, ಉಳಿದ ಹದಿನೆಂಟು ಮಂದಿ ಕೊಚ್ಚಿ ಹೋಗಿದ್ದಾರೆ. ನಾಪತ್ತೆಯಾದವರನ್ನು ಪತ್ತೆ ಹಚ್ಚಲು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಗಲೇ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದೆ.ಉತ್ತರ ಪ್ರದೇಶದ ಗಡಿಯಿಂದ ಸ್ವಲ್ಪ ದೂರದಲ್ಲಿರುವ ಮಟಿಯಾರ್ ಘಾಟ್ ಬಳಿ ದೋಣಿಯಲ್ಲಿ ಸುಮಾರು 24-25 ಜನರು ಪ್ರಯಾಣಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಆದರೆ ದೋಣಿ ಮಗಚಲು ಕಾರಣವೇನು ಅನ್ನುವುದು ಇನ್ನೂ ತಿಳಿದು ಬಂದಿಲ್ಲ.

ಪ್ರಾಥಮಿಕ ವಿಚಾರಣೆಯ ಪ್ರಕಾರ ದೋಣಿ ಮಗಚಿದಾಗ ದೋಣಿಯಲ್ಲಿದ್ದ ಜನರು ಒಮ್ಮೆಲೆ ದೋಣಿಯ ಒಂದು ಬದಿಗೆ ತೆರಳಿದ್ದಾರೆ. ದೋಣಿಯಲ್ಲಿದ್ದವರು ಯಾಕೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿಯುತ್ತಿಲ್ಲ ಎಂದು ಸಾರಣ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮನ್ ಸಮೀರ್ ತಿಳಿಸಿದ್ದಾರೆ.

ಇನ್ನು ನಾಪತ್ತೆಯಾದವನ್ನು ಪತ್ತೆ ಹಚ್ಚಲು ಗುರುವಾರವೂ ಶೋಧ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ

Comments (0)
Add Comment