ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಾಂಬ್ ಬೆದರಿಕೆ ಮೇಲ್

ಬೆಂಗಳೂರು: ಇದೀಗ ರಾಜ್ಯದಲ್ಲಿ ಮತ್ತೆ ಹುಸಿ ಬಾಂಬ್ ಮೇಲ್ ನ ಹಾವಳಿ ಪ್ರಾರಂಭವಾಗಿದೆ, ಇಂದು ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಾಂಬ್ ಬೆದರಿಕೆಯ ಮೇಲ್ ಬಂದಿದೆ.

ಸರ್. ಎಂ. ವಿಶ್ವೇಶ್ವರಯ್ಯ ಮ್ಯೂಸಿಯಂನ ಅಧಿಕಾರಿಗಳು ಪ್ರತಿನಿತ್ಯದಂತೆ ಇಂದು ಬೆಳಗ್ಗೆ ಕೂಡ ಇ-ಮೇಲ್ ಪರಿಶೀಲಿಸಿದ್ದಾರೆ. ಈ ವೇಳೆ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಾಂಬ್ ಇಟ್ಟಿರುವುದಾಗಿ Morgue999lol ಎಂಬ ಇ-ಮೇಲ್ ಐಡಿಯಿಂದ ಸಂದೇಶವೊಂದು ಬಂದಿತ್ತು. ಬಳಿಕ ಈ ಮೇಲ್ ಮ್ಯೂಸಿಯಂನಲ್ಲಿ ಭಯದ ವಾತಾವರಣ ಸೃಷ್ಟಿಮಾಡಿತ್ತು.

ಈ ಬಾಂಬ್ ಬೆದರಿಕೆಯ ಸಂದೇಶದಲ್ಲಿ ಮ್ಯೂಸಿಯಂನೊಳಗೆ ವಿವಿಧ ಸ್ಪೋಟಕಗಳನ್ನು ಗೌಪ್ಯ ಸ್ಥಳದಲ್ಲಿ ಇರಿಸಲಾಗಿದೆ. ಅವು ಬೆಳಗ್ಗೆ ಸ್ಫೋಟಗೊಂಡು ಮ್ಯೂಸಿಯಂನಲ್ಲಿರುವ ಎಲ್ಲರೂ ಸಾವನ್ನಪ್ಪುತ್ತಾರೆ. ನಾವು ಟೆರರಿಸರ್ಸ್ 111 ಎಂಬ ಸಂಘಟನೆಗೆ ಸೇರಿದವರು. ನಮ್ಮ ಗುಂಪಿನ ಹೆಸರನ್ನು ಮಾಧ್ಯಮದವರಿಗೆ ನೀಡಿ ಎಂದು ಕಳುಹಿಸಲಾಗಿತ್ತು.

ಈ ಬೆದರಿಕೆಯ ಸಂದೇಶವನ್ನು ನೋಡಿದ ತಕ್ಷಣ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸ್ ಸಿಬ್ಬಂದಿ, ಶ್ವಾನ ದಳ, ಬಾಂಬ್ ನಿಶ್ಕ್ರಿಯ ದಳದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಯಾವುದೇ ಸ್ಫೋಟಕ ವಸ್ತು ಕಂಡು ಬರದ ಕಾರಣ ಇದನ್ನು ಹುಸಿ ಬಾಂಬ್ ಕರೆ ಎಂದು ತಿಳಿದುಬಂದಿದೆ. ಇನ್ನು ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Comments (0)
Add Comment