ಬೆಂಗಳೂರಿನ 12 ಕಡೆಗಳಲ್ಲಿ NIA ಅಧಿಕಾರಿಗಳ ದಾಳಿ

ಬೆಂಗಳೂರು: ರಾಜಧಾನಿಯ ಒಟ್ಟು 12 ಕಡೆಗಳಲ್ಲಿ ಇಂದು ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು ಬೆಳಗಿನ ಜಾವ ದಾಳಿ ನಡೆದಿದ್ದು, ಶಂಕಿತ ಉಗ್ರ ನಸೀರ್ ನೀಡಿರುವ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ.

ಹೆಬ್ಬಾಳದಲ್ಲಿ ಗ್ರೇನೇಡ್ ದೊರೆತ ಪ್ರಕರಣದ ಬಗ್ಗೆ ಎಫ್‌ ಐ ಆರ್ ದಾಖಲಾಗಿತ್ತು. ಆರ್‌ ಟಿ ನಗರದ ಮನೆಯೊಂದರಲ್ಲಿ ಗ್ರೆನೇಡ್ ಹಾಗು ಪಿಸ್ತೂಲ್ ಸಿಕ್ಕಿತ್ತು. ಈ ಪ್ರಕರಣ ಎನ್‌ ಐಎಗೆ ವರ್ಗಾವಣೆಯಾಗಿದ್ದು, ತನಿಖಾ ಸಂಸ್ಥೆ ತೀವ್ರವಾಗಿ ತನಿಖೆ ನಡೆಸುತ್ತಿದೆ. ಬಂಧಿತ ಶಂಕಿತ ಉಗ್ರ ಈ ವಿಚಾರದಲ್ಲಿ ಹಲವು ಮಾಹಿತಿ ನೀಡಿದ್ದು, ಆತನಿಂದ ಪಡೆದ ಮಾಹಿತಿಯಂತೆ ದಾಳಿ ನಡೆಸಲಾಗಿದೆ.

ನಗರದಲ್ಲಿ ಬಂಧನವಾಗಿದ್ದ ಐವರು ಶಂಕಿತ ಉಗ್ರರ ಪ್ರಕರಣಕ್ಕೆ ಸಂಬಂಧಿಸಿ ದಾಳಿಗಳು ನಡೆದಿವೆ. ಮುದಾಸಿರ್, ಜಾಹಿದ್, ತಬ್ರೇಜ್ ಮಹಮದ್ ಉಮರ್ ಸೇರಿ 5 ಜನರನ್ನು ಬಂಧಿಸಲಾಗಿತ್ತು. ಹೆಬ್ಬಾಳ ಠಾಣಾ ವ್ಯಾಪ್ತಿಯ ಸುಲ್ತಾನ್ ಪಾಳ್ಯದಲ್ಲಿ ಮೊದಲು ಸಿಸಿಬಿ ಅಧಿಕಾರಿಗಳು ಜುಲೈ 1ರಂದು ದಾಳಿ ಮಾಡಿದ್ದರು. ಈ ವೇಳೆ 7 ಪಿಸ್ತೂಲ್, 45 ಗುಂಡುಗಳು, ಗ್ರನೇಡ್ ಹಾಗೂ ವಾಕಿಟಾಕಿಗಳು ಸಿಕ್ಕಿದ್ದವು.

ಇತ್ತೀಚೆಗಷ್ಟೇ ಕೇಸ್ ಎನ್‌ ಐ ಎಗೆ ವರ್ಗಾವಣೆ ಆಗಿತ್ತು. ವಿಚಾರಣೆಯ ವೇಳೆ ವಿದೇಶದಿಂದ ಜುನೈದ್ ಎಂಬ ಉಗ್ರ ಆಪರೇಟ್ ಮಾಡುತ್ತಾ ಇದ್ದದ್ದು ಬೆಳಕಿಗೆ ಬಂದಿತ್ತು. ಜೊತೆಗೆ ಸರಣಿ ಬಾಂಬ್ ಬ್ಲಾಸ್ಟ್ ರೂವಾರಿ ನಾಸೀರ್ ಜೈಲಿನಲ್ಲಿ ಈ ಶಂಕಿತರಿಗೆ ಭಯೋತ್ಪಾದಕ ಕೃತ್ಯಗಳ ತರಬೇತಿ ನೀಡಿದ್ದ ಎಂದು ಹೇಳಲಾಗಿದೆ.

ಈ‌ ಸಂಬಂಧ ತನಿಖೆ ನಡೆಸುತ್ತಿರುವ ಎನ್‌ ಐಎ ಇಂದು ನಡೆಸಿರುವ ದಾಳಿಯಲ್ಲಿ ಆರು ಕಡೆ ಮನೆಗಳ ಪರಿಶೀಲನೆ ಮಾಡಿದೆ. ಹೆಚ್ಚಿನ ಸ್ಫೋಟಕ ವಸ್ತುಗಳು, ಆಯುಧಗಳು, ಸಂವಹನಕ್ಕೆ ಬಳಸುತ್ತಿದ್ದ ಗ್ಯಾಜೆಟ್‌ ಗಳ ಪತ್ತೆ ಹಾಗೂ ಇನ್ನಷ್ಟು ಶಂಕಿತರ ಬಂಧನದ ಸಾಧ್ಯತೆ ಇದೆ. ಸದ್ಯ ಕೆಲವರನ್ನು ತನಿಖೆ ನಡೆಸಲಾಗುತ್ತಿದ್ದು, ಯಾರನ್ನೂ ಬಂಧಿಸಿಲ್ಲ.

Comments (0)
Add Comment