ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ: ಜಿಲ್ಲಾಧಿಕಾರಿ ಡಾ. ವೆಂಕಟೇಶ್.!

 

ದಾವಣಗೆರೆ; ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ಕುರಿತು ರೈತರಿಗೆ ಜಾಗೃತಿ ಮೂಡಿಸಿ ಹೆಚ್ಚು ಪ್ರಚಾರ ಪಡಿಸಬೇಕು ಹಾಗೂ ಭತ್ತ ಖರೀದಿ ಕೇಂದ್ರಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಭತ್ತದ ಬೆಂಬಲ ಬೆಲೆ ಖಾತ್ರಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನ ಜಿಲ್ಲೆಯ ಭತ್ತವನ್ನು ಖರೀದಿ ಮಾಡಲಾಗುತ್ತಿದ್ದು,  ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸಾಮಾನ್ಯ ಭತ್ತಕ್ಕೆ ರೂ.2183, ಎ ಗ್ರೇಡ್ ಭತ್ತಕ್ಕೆ ರೂ.2203, ರಾಗಿಗೆ ರೂ.3846ನ್ನು ಬೆಂಬಲ ಬೆಲೆಯಾಗಿ ನಿಗಧಪಡಿಸಲಾಗಿದೆ. ಭದ್ರಾ ಅಚ್ಚುಕಟ್ಟು ಪ್ರದೇಶಗಳಿಗೆ ಆನ್ ಅಂಡ್ ಆಫ್ ಪದ್ಧತಿಯಿಂದ ನಾಲೆಗಳಿಗೆ ನೀರನ್ನು ಹರಿಸುತ್ತಿರುವುದರಿಂದ ಉತ್ತಮ ಭತ್ತದ ಇಳುವರಿಯ ನಿರೀಕ್ಷೆ ಇದೆ ಎಂದರು.

ದಾವಣಗೆರೆ ಹರಿಹರ ಹೊನ್ನಾಳಿ ಮತ್ತು ಚನ್ನಗಿರಿಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಜಿಲ್ಲೆಯಲ್ಲಿ  51,000 ಹೆಕ್ಟೆರ್ ಪ್ರದೇಶದಲ್ಲಿ  ಭತ್ತದ ಬಿತ್ತನೆಯಾಗಿದೆ. 10 ರಿಂದ 15 ಸಾವಿರ ಕ್ವಿಂಟಾಲ್ ಭತ್ತದ ಖರೀದಿಗೆ ಜಿಲ್ಲೆಯಲ್ಲಿ ಅವಕಾಶವಿದೆ. ಖರೀದಿ ಕೇಂದ್ರಗಳಲ್ಲಿ ರೈತರು ತಮ್ಮ ಭತ್ತವನ್ನು ಮಾರಾಟ ಮಾಡಲು ನವೆಂಬರ್ 15 ರಿಂದ ಡಿಸೆಂಬರ್ 23ರವರೆಗೆ ನೋಂದಾಯಿಸಬಹುದು. ಒಬ್ಬ ರೈತರಿಂದ 25 ರಿಂದ 40 ಕ್ವಿಂಟಲ್ ವರೆಗೆ ಭತ್ತವನ್ನು ಖರೀದಿ ಮಾಡಲು ಅವಕಾಶವಿದೆ ಎಂದರು.

ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಸ್ಥಿರತೆ ಒದಗಿಸುವ ನಿಟ್ಟಿನಲ್ಲಿ ಹಾಗೂ ಮಾರುಕಟ್ಟೆ ಕುರಿತು ಅವರಲ್ಲಿ ಅರಿವು ಮೂಡಿಸುವಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆ ಅನುಷ್ಟಾನ ನೆರವಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರದ ಕನಿಷ್ಠ ಬೆಂಬಲ ಬೆಲೆ ಯೋಜನೆ ಅನುಷ್ಟಾನಕ್ಕಾಗಿ ಜಿಲ್ಲೆಯಿಂದ ಪ್ರಸ್ತಾವನೆ ಸಲ್ಲಿಸಲಾಗುವುದು, ಖರೀದಿ ಕೇಂದ್ರ ತೆರೆಯಲು ಅವಶ್ಯವಾದ ಎಲ್ಲ ಸಿದ್ದತೆ ನಡೆಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎಪಿಎಂಸಿ ಅಧಿಕಾರಿಗಳು ಭತ್ತ ಖರೀದಿ ಕೇಂದ್ರಗಳಿಗೆ ಕಂಪ್ಯೂಟರ್, ಪೀಠೋಪಕರಣಗಳು, ಸಿಸಿಟಿವಿ ಕ್ಯಾಮರಾ  ಹಾಗೂ ರೈತರಿಂದ ಭತ್ತ ಹಾಗೂ ರಾಗಿಯನ್ನು ಖರೀದಿಸುವಾಗ ವಿಡಿಯೋ ವ್ಯವಸ್ಥೆ ಮಾಡಬೇಕು. ರಾಗಿಗೆ ಬೆಂಬಲ ಬೆಲೆ ಹೆಚ್ಚಾಗಿರುವ ಕಾರಣ ರೈತರಲ್ಲಿ ಹೆಚ್ಚು ರಾಗಿ ಬೆಳೆಯಲು ಪೆÇ್ರೀತ್ಸಾಹಿಸಬೇಕು.

ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಭತ್ತ ಖರೀದಿ ಕುರಿತು ಜಿಲ್ಲಾ ವ್ಯಾಪ್ತಿಯಲ್ಲಿ ರೈತರಿಗೆ ಹೆಚ್ಚು ಪ್ರಚಾರ ಮಾಡಬೇಕು ಹಾಗೂ ಖರೀದಿ ಕೇಂದ್ರಗಳಲ್ಲಿ ತಾಂತ್ರಿಕ ದೋಷಗಳನ್ನು ಪರಿಹರಿಸಬೇಕು ಎಂದರು.

ರೈತರಿಂದ ಖರೀದಿಸಿದ ಭತ್ತವನ್ನು ಸಾರವರ್ಧಿತ ಅಕ್ಕಿ ತಯಾರಿಸುವ ಯಂತ್ರವನ್ನು ಅಳವಡಿಸುವ ಅಕ್ಕಿ ಗಿರಣಿಗಳಿಗೆ ಹಲ್ಲಿಂಗ್ ಮಾಡಲು ನೀಡಲಾಗುತ್ತದೆ ಎಂದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಶಿದ್ರಾಮ ಮಾರಿಹಾಳ್, ಎ.ಪಿ.ಎಂ.ಸಿ ಸಹಾಯಕ ನಿರ್ದೇಶಕ ಗಣೇಶ್, ಎ.ಪಿ.ಎಂ.ಸಿ ಕಾರ್ಯದರ್ಶಿ ಗಿರೀಶ್ ಉಪಸ್ಥಿತರಿದ್ದರು.

ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ: ಜಿಲ್ಲಾಧಿಕಾರಿ ಡಾ. ವೆಂಕಟೇಶ್.!
Comments (0)
Add Comment