ಬೆಳಗಾವಿ : ಚಳಿಗಾಲದ ಅಧಿವೇಶನಕ್ಕೆ ಕೌಂಟ್‌ಡೌನ್ – ಮೊದಲ ದಿನವೇ ಪ್ರತಿಭಟನೆಯ ಸ್ವಾಗತ

ಬೆಳಗಾವಿ : ಕುಂದಾನಗರಿ ಬೆಳಗಾವಿಯಲ್ಲಿ ಇಂದಿನಿಂದ ಹತ್ತು ದಿನಗಳ ಕಾಲ ಚಳಿಗಾಲ ಅಧಿವೇಶನ ಆರಂಭವಾಗಲಿದೆ. ಅಧಿವೇಶನದ ಮೊದಲ ದಿನವೇ ಸರ್ಕಾರಕ್ಕೆ ರೈತ ಸಂಘಟನೆ ಸೇರಿದಂತೆ ವಿವಿಧ 5 ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಯಲಿವೆ.

ಬರ ನಿರ್ವಹಣೆ ವಿಫಲ, ಕೃಷಿ ಕಾಯ್ದೆ ವಾಪಸಾತಿ, ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕೊಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸುವರ್ಣ ಸೌಧ ಮುತ್ತಿಗೆ ಹಾಕಲಿದ್ದಾರೆ. ಚನ್ನಮ್ಮ ವೃತ್ತದಿಂದ ಸುವರ್ಣ ಸೌಧದವರೆಗೆ ಪ್ರತಿಭಟನಾ ಮೆರವಣಿಗೆ ಹೊರಟು ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದಾರೆ. ಇನ್ನು, ಮುಂಡರಗಿ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆಯಿಂದ ಗದಗ ಹರಪನಹಳ್ಳಿ ರೈಲು ಮಾರ್ಗ ಮಂಜೂರು ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ಗದಗ ಜಿಲ್ಲೆಯ ಬಗರ್ ಹುಕುಂ ಹಕ್ಕು ಪತ್ರ ನೀಡಲು ಆಗ್ರಹಿಸಿ ಹೋರಾಟ ನಡೆಸಲಿದ್ದಾರೆ. ಸಫಾಯಿ ಕರ್ಮಚಾರಿ ಸಮಿತಿಯಿಂದ ವಿವಿಧ ಬೇಡಿಕೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದರೆ, ವಿಶೇಷಚೇತನರ ಶಾಲೆಗಳ ಶಿಕ್ಷಕರ ಹಾಗೂ ಶಿಕ್ಷಕೇತರ ಸಂಘದಿಂದ ವೇತನ ಅನುದಾನ, ಸೇವಾ ಭದ್ರತೆ ಒದಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಿದ್ದಾರೆ. ಹೀಗೆ ಒಟ್ಟು ಐದಕ್ಕೂ ಹೆಚ್ಚು ಸಂಘಟನೆಗಳು ಮೊದಲ ದಿನವೇ ಪ್ರತಿಭಟನೆ ನಡೆಸಲಿದ್ದಾರೆ.

Comments (0)
Add Comment