ಬೆಳಗಾವಿ: ಪುತ್ರನ ಪರ ಪ್ರಚಾರಕ್ಕೆ ಆಶಾ ಕಾರ್ಯಕರ್ತೆಯರಿಗೆ ಒತ್ತಡ – ಸಚಿವೆ ಹೆಬ್ಬಾಳ್ಕರ್ ವಿರುದ್ಧ ಕ್ರಿಮಿನಲ್ ಕೇಸ್

ಬೆಳಗಾವಿ: ಲೋಕಸಭೆ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಗುರುವಾರ ಸಮನ್ಸ್‌ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿಯ ಕುವೆಂಪುನಗರದ ತಮ್ಮ ಗೃಹಕಚೇರಿ ಪಕ್ಕದ ಸಭಾಂಗಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರ ಸಭೆಯನ್ನು ಮಾರ್ಚ್ 20ರಂದು ನಡೆಸಿದ್ದರು. ಅದಕ್ಕೆ ಅನುಮತಿ ಪಡೆದಿರಲಿಲ್ಲ. ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿತ್ತು. ಅಲ್ಲದೇ ತಮ್ಮ ಪುತ್ರ ಮೃಣಾಲ್ ಪರ ಪ್ರಚಾರ ಮಾಡುವಂತೆ ಈ ಸಭೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅಂಗನವಾಡಿ, ಆಶಾ ಕಾರ್ಯಕರ್ತರಿಗೆ ಸೂಚಿಸಿದ್ದರು ಎಂಬ ಆರೋಪ ಕೂಡ ಕೇಳಿ ಬಂದಿತ್ತು. ಹಾಗಾಗಿ, ಈಗ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಮನ್ಸ್ ಜಾರಿಯಾಗಿದ್ದು, ಏಪ್ರಿಲ್ 30ರೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ. ಎರಡನೇ ಆರೋಪಿಯಾಗಿ ಸಭೆಗೆ ಅವಕಾಶ ಮಾಡಿಕೊಟ್ಟ ಸಭಾಂಗಣದ ಮಾಲೀಕ ಉಮೇಶ ಮಲ್ಲಪ್ಪ ವಾಸಣ್ಣವರಗೂ ಸಮನ್ಸ್‌ ಜಾರಿ ಮಾಡಲಾಗಿದೆ.

Comments (0)
Add Comment