ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂಬ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿಕೆಗೆ ತೀವ್ರ ಆಕ್ರೋಶ

ಬೆಂಗಳೂರು: ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂಬ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿವಾದಾತ್ಮಕ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವಿರೋಧ ಪಕ್ಷದ ನಾಯಕರು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ , ಸಿಎಂ ಸಿದ್ದರಾಮಯ್ಯ, ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸಚಿವ ಸಂಪುಟದಿಂದ ಹೊರಗೆ ಇಡಬೇಕು ಎಂದು ಆಗ್ರಹಿಸಿದರು.ಬೆಳಗಾವಿ ವಿಶಾಲ ಕರ್ನಾಟಕಕ್ಕೆ ಸೇರಿ ಅನೇಕ ವರ್ಷಗಳಾಗಿದೆ. ಓಟಿನ ರಾಜಕಾರಣಕ್ಕೆ‌ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ನೀಡಿರುವುದು ವಿಷಾದಕರ. ಕಾಶ್ಮೀರ ಕೂಡ ಪಾಕಿಸ್ತಾನಕ್ಕೆ ಸೇರಿದ್ದು ಅಂತ ಕಾಂಗ್ರೆಸ್‌ನವರು ಹೇಳುತ್ತಾರೆ. ಸಿಎಂ ಸಿದ್ದರಾಮಯ್ಯ, ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸಚಿವ ಸಂಪುಟದಿಂದ ಹೊರಗೆ ಇಡಬೇಕು. ಹೆಬ್ಬಾಳ್ಕರ್ ಆರೂವರೆ ಕೋಟಿ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು. ಹಾಗಾಗಿಯೇ ಬೆಳಗಾವಿ ಅಧಿವೇಶನ ಮಾಡಲಾಗುತ್ತಿದೆ. ಅವರ ಹೇಳಿಕೆ ಬೇರೆಯವರನ್ನು ಕೆರಳಿಸಲಿದೆ ಎಂದು ಕಿಡಿಕಾರಿದರು.

ಶಾಸಕ ಡಾ. ಅಶ್ವಥ್ ನಾರಾಯಣ್, ಕರ್ನಾಟಕ ವಿವಿಧ ರಾಜ್ಯದಲ್ಲಿ ಹಂಚಿ ಹೋಗಿತ್ತು. ಅದಕ್ಕೆ‌ ಕರ್ನಾಟಕ ಏಕೀಕರಣ ಆಗಿದ್ದು. ಇಂತಹ ಸಂದರ್ಭದಲ್ಲಿ ಹಿಂದಕ್ಕೆ‌ ಹೋಗುವ ಅವಶ್ಯಕತೆ ಇರಲಿಲ್ಲ. ಇದು ರಾಜಕೀಯ ಪ್ರೇರಿತ ಹೇಳಿಕೆ. ಜನರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಆಗಬೇಕು. ಕನ್ನಡಿಗರು ವಿವಿಧ ಸಂಸ್ಕೃತಿಯಲ್ಲಿ ಏಕತೆ ಕಾಣಬೇಕು. ಇವರ ಹೇಳಿಕೆಯನ್ನು ಮರಾಠಿಗರಾಗಲಿ, ಕನ್ನಡಿಗರಾಗಲಿ ಬೆಂಬಲಿಸಲ್ಲ ಎಂದರು.

ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ಜ.07ರಂದು ನಡೆದ 6ನೇ ಕನ್ನಡ ಸಮಾವೇಶ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾತಿನ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.

Comments (0)
Add Comment