ಬ್ಯಾಂಕ್‌ ಗಳಿಗೆ ವಾರಕ್ಕೆ 5 ದಿನ ಕೆಲಸ: ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ

ನವದೆಹಲಿ: ಈಗಾಗಲೇ ಬ್ಯಾಂಕ್‌ಗಳ ಉದ್ಯೋಗಿಗಳ ಸಂಘಟಿತ ಒಕ್ಕೂಟ, ಯುನೈಟೆಡ್‌ ಫೋರಂ ಆಫ್ ಬ್ಯಾಂಕ್‌ ಯೂನಿಯನ್‌ ನೌಕರರ ಸಂಬಳ ಹೆಚ್ಚಳಕ್ಕೆ ಮತ್ತು ವಾರದ ಐದು ದಿನಗಳ ಕೆಲಸಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದೀಗ ಸರ್ಕಾರ ಈ ಮನವಿಯನ್ನು ಪರಿಗಣಿಸಿ ಶೀಘ್ರದಲ್ಲೇ ಅನುಕೂಲಕರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಮೂಲಗಳ ಪ್ರಕಾರ, ಬ್ಯಾಂಕ್‌ಗಳ ಶಾಖೆಗಳ ಕಾರ್ಯನಿರ್ವಹಣೆ ಸಮಯದಲ್ಲಿ(ಗ್ರಾಹಕರು ವಹಿವಾಟು ನಡೆಸುವ ಸಮಯ ) ಇಳಿಕೆ ಮಾಡಲಾಗುವುದಿಲ್ಲ ಎಂದು ಯೂನಿಯನ್‌ ಹೇಳಿಕೊಂಡಿದೆ.

ಸದ್ಯ 2015 ರ ಒಪ್ಪಂದದ ಪ್ರಕಾರ, ಪ್ರತಿ ಭಾನುವಾರ ಮತ್ತು ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಬ್ಯಾಂಕ್ ರಜಾದಿನಗಳಾಗಿವೆ. ಆದರೆ ಉದ್ಯೋಗಿಗಳ ಬೇಡಿಕೆ ಪ್ರಕಾರ ತಿಂಗಳ ಎಲ್ಲ ಶನಿವಾರ, ಭಾನುವಾರವೂ ರಜೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು ಕೇಂದ್ರ ವಿತ್ತ ಸಚಿವಾಲಯದ ಅನುಮೋದನೆ ಪಡೆದ ಬಳಿಕವೇ ಹೊಸ ನಿಯಮ ಜಾರಿಯಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

Comments (0)
Add Comment