ಭದ್ರಾಮೇಲ್ದಂಡೆ ಯೋಜನೆ: 33 ದಿನಗಳ ತಲುಪಿದ ರೈತ ಹೋರಾಟ.!

 

ಚಿತ್ರದುರ್ಗ : ಭದ್ರಾಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಮಂಜೂರು ಮಾಡಿರುವ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಬಿಡುಗಡೆಗೊಳಿಸುವಂತೆ ಕಳೆದ 33 ದಿನಗಳಿಂದ ಜಿಲ್ಲಾ ಪಂಚಾಯಿತಿ ಎದುರು ನಡೆಸುತ್ತಿದ್ದ ಧರಣಿಯನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ತಿಳಿಸಿದರು.

ಧರಣಿ ಸ್ಥಳದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 1974 ರಲ್ಲಿದ್ದಂತ ಬರಗಾಲ ಈಗ ಮತ್ತೆ ಎದುರಾಗಿದೆ. ಭದ್ರಾಮೇಲ್ದಂಡೆ ವಿಚಾರವಾಗಿ ಸರ್ಕಾರದ ಗಮನ ಸೆಳೆಯುತ್ತಲೆ ಬರುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜವಾಬ್ದಾರಿಯಿಂದ ನಡೆದುಕೊಂಡಿದ್ದರೆ ಇಷ್ಟೊತ್ತಿಗೆ ಜಿಲ್ಲೆಗೆ ನೀರು ಹರಿಯುತ್ತಿತ್ತು. ಕೆರೆಗಳು ತುಂಬಿರುತ್ತಿದ್ದವು. ನೀರಾವರಿ ಯೋಜನೆಯನ್ನು ಪೂರ್ಣಗೊಳಿಸುವಂತೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿಗೆ ಮನವಿ ಕೊಟ್ಟಿದ್ದೇವೆ. ಆಡಳಿತಾತ್ಮಕ ಹಾಗೂ ಕಾನೂನು ಸಮಸ್ಯೆಗಳನ್ನು ಬಗೆಹರಿಸಿ ಮಳೆಗಾಲ ಮುಗಿಯುವುದರೊಳಗೆ ನೀರಾವರಿ ಯೋಜನೆಯನ್ನು ಮುಗಿಸಬೇಕು. ಚುನಾವಣೆ ಘೋಷಣೆಯಾದ ಒಂದು ವಾರದವರೆಗೆ ನೋಡುತ್ತೇವೆ. ನಮ್ಮ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸದಿದ್ದರೆ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಜೆಪಿ. ವಿರುದ್ದ ಮತ ಚಲಾಯಿಸುವಂತೆ ಜಿಲ್ಲೆಯಾದ್ಯಂತ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತೇವೆಂದು ಹೇಳಿದರು.

ಇಲ್ಲಿಯವರೆಗೂ ನಮ್ಮ ಧರಣಿಗೆ 2 ಲಕ್ಷ ಹದಿನೆಂಟು ಸಾವಿರದ 900 ರೂ.ಗಳು ಬಂದಿದೆ. ಒಂದು ಲಕ್ಷ 84 ಸಾವಿರದ 547 ರೂ.ಗಳು ಖರ್ಚಾಗಿದೆ. 34 ಸಾವಿರದ 353 ರೂ.ಗಳು ಉಳಿದಿರುವುದನ್ನು ಮುಂದಿನ ಹೋರಾಟಕ್ಕೆ ಬಳಸುತ್ತೇವೆ. ಹದಿನಾಲ್ಕು ಪ್ಯಾಕೆಟ್ ಅಕ್ಕಿ ಕೂಡ ಮಿಕ್ಕಿದೆ. ಕೆಲವರು ಅವಲಕ್ಕಿ, ಎಣ್ಣೆ ಕೊಟ್ಟಿದ್ದಾರೆ. ನಮಗೆ ಬೆಂಬಲಿಸಿದ ಎಲ್ಲರಿಗೂ ಪ್ರಶಂಸನಾ ಪತ್ರಗಳನ್ನು ನೀಡಬೇಕೆಂದಿದ್ದೇವೆಂದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಡಿ.ಎಸ್.ಹಳ್ಳಿ, ರೈತ ಮುಖಂಡರುಗಳಾದ ಆರ್.ಬಿ.ನಿಜಲಿಂಗಪ್ಪ, ಅಪ್ಪರಸನಹಳ್ಳಿ ಬಸವರಾಜಪ್ಪ, ಮಂಜುನಾಥ್, ರಾಜಶೇಖರ್, ಸತೀಶ್, ಮಲ್ಲೇಶಿ, ತಿಪ್ಪೇಸ್ವಾಮಿ, ನಿರಂಜನಮೂರ್ತಿ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

 

ಭದ್ರಾಮೇಲ್ದಂಡೆ ಯೋಜನೆ: 33 ದಿನಗಳ ತಲುಪಿದ ರೈತ ಹೋರಾಟ.!
Comments (0)
Add Comment