ಭದ್ರಾ ಯೋಜನೆಯನ್ನು ಶೀಘ್ರವೇ ಪೂರ್ಣಗೊಳಿಸಿ: ಈಚಘಟ್ಟದ ಸಿದ್ದವೀರಪ್ಪ

 

ಚಿತ್ರದುರ್ಗ : ಭದ್ರಾ ಯೋಜನೆಯನ್ನು ಶೀಘ್ರವೇ ಪೂರ್ಣಗೊಳಿಸಿ ಜಿಲ್ಲೆಗೆ ನೀರು ಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವಿವಿಧ ಜನಪರ ಸಂಘಟನೆಗಳು 31 ದಿನಗಳ ಕಾಲ ಜಿಲ್ಲಾ ಪಂಚಾಯಿತಿ ಮುಂಭಾಗ ಧರಣಿ ನಡೆಸಿ ಕೇಂದ್ರ ಸಚಿವರ ಭರವಸೆಯಂತೆ ಧರಣಿಯನ್ನು ಹಿಂದಕ್ಕೆ ಪಡೆದ ಜಿಲ್ಲೆಯ ರೈತರು ಸೋಮವಾರ ಚಿಕ್ಕಮಗಳೂರು ಜಿಲ್ಲೆ ಮುತ್ತಿನಕೊಪ್ಪ ಪ್ಯಾಕೇಜ್-1 ಹಾಗೂ ಅಬ್ಬಿನಹೊಳಲು ಬಳಿ ಕಾಮಗಾರಿಯನ್ನು ವೀಕ್ಷಿಸಿದರು.

ಮುತ್ತಿನಕೊಪ್ಪ ಸಮೀಪ ಎರಡು ಕಡೆ ಲಿಫ್ಟ್ ಕರೆಂಟ್ ಕೆಲಸ ಇನ್ನು ಆಗಬೇಕಿದೆ. ಭದ್ರಾ ಡ್ಯಾಂಗೆ ಸಂಪರ್ಕ ಕಲ್ಪಿಸುವ ಕೆಲಸ ಅರ್ಧವಾಗಿದೆ. ಕರೆಂಟ್ ಕೆಲಸ ಇನ್ನು ಆಗುವುದು ಬಹಳಷ್ಟಿದೆ. 22 ಟವರ್ಗಳಲ್ಲಿ ಹತ್ತು ಕೆಲಸ ಆಗಿದೆ. ಒಂಬತ್ತು ಪೆಂಡಿಂಗ್ ಇದೆ. ಇನ್ನು ಮೂರು ಆಗಿಲ್ಲ ಎಂದು ವೀಕ್ಷಣೆಯ ನೇತೃತ್ವ ವಹಿಸಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ತಿಳಿಸಿದ್ದಾರೆ.

ಅಬ್ಬಿನಹೊಳಲು ಸಮೀಪ ಎಂಟು ವರ್ಷದಿಂದ ನಿಂತಿದ್ದ ಕಾಮಗಾರಿ ಕಳೆದ ಏಳರಿಂದ ಆರಂಭಗೊಂಡಿದೆ. ಹೆಚ್ಚಿನ ಪರಿಹಾರಕ್ಕಾಗಿ ಒತ್ತಾಯಿಸಿ ಈ ಭಾಗದ ರೈತರು ನೀರಾವರಿ ಯೋಜನೆಗೆ ಜಮೀನುಗಳನ್ನು ಕೊಟ್ಟಿರಲಿಲ್ಲ. ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಇವರುಗಳು ರೈತರ ಮನವೊಲಿಸಿದ್ದರಿಂದ ಕೆಲಸ ಶುರುವಾಗಿದೆ.

ವಿಶ್ವೇಶ್ವರಯ್ಯ ಜಲನಿಗಮ ನಿಯಮಿತ ಸಹಾಯಕ ಕಾರ್ಯಪಾಲಕ ಅಭಿಯಂತರವರ ಕಚೇರಿ ಭದ್ರಾಮೇಲ್ದಂಡೆ ಯೋಜನೆ ಉಪ ವಿಭಾಗದ ಮುಂಭಾಗ ರೈತರು ಪ್ರತಿಭಟನೆ ನಡೆಸಿ ಯೋಜನೆಗೆ ಯಾವುದೇ ತೊಡಕುಂಟಾಗದಂತೆ ಕಾಮಗಾರಿಗೆ ಚುರುಕು ನೀಡಿ ಜಿಲ್ಲೆಗೆ ನೀರು ಹರಿಸಬೇಕೆಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಡಿ.ಎಸ್.ಹಳ್ಳಿ, ಅಪ್ಪರಸನಹಳ್ಳಿ ಬಸವರಾಜ್, ಆರ್.ಬಿ.ನಿಜಲಿಂಗಪ್ಪ, ಸೇರಿದಂತೆ ಜಿಲ್ಲೆಯ ಆರು ತಾಲ್ಲೂಕಿನ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಸೇರಿದಂತೆ ನೂರ ಅರವತ್ತಕ್ಕೂ ಹೆಚ್ಚು ರೈತರು ವೀಕ್ಷಣೆಗೆ ತೆರಳಿದ್ದರು.

 

ಭದ್ರಾ ಯೋಜನೆಯನ್ನು ಶೀಘ್ರವೇ ಪೂರ್ಣಗೊಳಿಸಿ: ಈಚಘಟ್ಟದ ಸಿದ್ದವೀರಪ್ಪ
Comments (0)
Add Comment