ಭಾರತಕ್ಕೆ ಬೇಕಾಗಿದ್ದ ಉಗ್ರ ಖೈಸರ್ ಫಾರೂಕ್ ಗುಂಡೇಟಿಗೆ ಬಲಿ

ಇಸ್ಲಾಮಾಬಾದ್‌: ಭಾರತಕ್ಕೆ ಬೇಕಾಗಿದ್ದ ಮೋಸ್ಟ್‌ ವಾಟೆಂಡ್‌ ಉಗ್ರ ಪಾಕಿಸ್ತಾನದ ಕರಾಚಿಯಲ್ಲಿ ಗುಂಡೇಟಿಗೆ ಬಲಿಯಾಗಿದ್ದಾನೆ ಎಂದು ವರದಿಯಾಗಿದೆ. ನಿಷೇಧಿತ ಲಷ್ಕರ್‌-ಇ-ತೊಯ್ಬಾ ಸಂಘಟನೆಯ ಸ್ಥಾಪಕ ಸದಸ್ಯ ಉಗ್ರ ಖೈಸರ್ ಫಾರೂಕ್ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.

ಕರಾಚಿಯ ಬೀದಿಯಲ್ಲಿ ಇತರದೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಫಾರೂಕ್‌ ಮೇಲೆ ದಾಳಿ ನಡೆದಿದೆ. ಈತ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್‌ ಸಯೀದ್‌ನ ಆಪ್ತ ಸಹಾಯಕನಾಗಿದ್ದ.

2008 ರ ನವೆಂಬರ್ 26 ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ 10 ಲಷ್ಕರ್-ಎ-ತೈಬಾ ಭಯೋತ್ಪಾದಕರು ಪ್ರವೇಶಿಸಿದ್ದರು. ಭಯೋತ್ಪಾದಕರು ಸರಣಿ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಗಳನ್ನು ನಡೆಸಿ 166 ಜನರನ್ನು ಕೊಂದಿದ್ದರು. 300 ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ್ದರು.ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ವ್ಯಾಪಾರ ಮತ್ತು ವಸತಿ ಸಂಕೀರ್ಣ, ಲಿಯೋಪೋಲ್ಡ್ ಕೆಫೆ, ತಾಜ್ ಹೋಟೆಲ್ ಮತ್ತು ಒಬೆರಾಯ್ ಟ್ರೈಡೆಂಟ್ ಹೋಟೆಲ್‌ಗಳಲ್ಲಿ ದಾಳಿ ನಡೆಸಲಾಗಿತ್ತು.

ಫಾರೂಕ್ ಹತ್ಯೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಆದರೆ, ಪೊಲೀಸರು ಈ ದೃಶ್ಯಾವಳಿಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.ದಾಳಿಯ ವೇಳೆ ಓರ್ವ ಅಪ್ರಾಪ್ತ ವಯಸ್ಕ ಬಾಲಕನೂ ಗಾಯಗೊಂಡಿದ್ದಾನೆ ಎಂದು ವರದಿಯಾಗಿದೆ.

Comments (0)
Add Comment