ಭಿನ್ನಮತ ಶಮನಕ್ಕೆ ಮುಂದಾದ ಬಿ.ವೈ.ವಿಜಯೇಂದ್ರ – ರಮೇಶ್ ಜಾರಕಿಹೊಳಿ ಜೊತೆ ಮಾತುಕತೆ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಈಗ ಪಕ್ಷದೊಳಗಿನ ಆಂತರಿಕ ಭಿನ್ನಮತ ಶಮನಕ್ಕೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಬಿ.ವೈ.ವಿಜಯೇಂದ್ರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ, ಈ ಹಿಂದೆ ರಮೇಶ್ ಜಾರಕಿಹೊಳಿ ಹಲವು ಬಾರಿ ಅಸಮಾಧಾನವನ್ನು ಹೊರ ಹಾಕುತ್ತಾ ಬಂದಿದ್ದರು. ಅವರ ಮುಂದಿನ ನಡೆ ಬಗ್ಗೆ ಹಲವು ರೀತಿಯಲ್ಲಿ ಚರ್ಚೆ ನಡೆಯುತ್ತಿತ್ತು. ನನ್ನ ಜವಾಬ್ದಾರಿ ಎಲ್ಲರನ್ನೂ ಪಕ್ಷದಲ್ಲಿ ಜತೆಗೆ ಕರೆದೊಯ್ಯುವುದಾಗಿದೆ ಎಂದರು.

ಇನ್ನು ರಮೇಶ್ ಜಾರಕಿಹೊಳಿ ಭೇಟಿ ಮಾಡಿ ಅರ್ಧ ಗಂಟೆ ಚರ್ಚೆ ಮಾಡಿದ್ದೇನೆ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗಬೇಕು, ಪಕ್ಷದಲ್ಲಿ ಸಹಕಾರ ಕೊಡುತ್ತೇನೆ ಎಂದು ಹೇಳಿದ್ದಾರೆ. ಅವರಿಗೂ ಕೆಲವು ಸಣ್ಣಪುಟ್ಟ ಅಸಮಾಧಾನ ಇದ್ದವು, ಅದರ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿದರು.

ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಸೋಮಣ್ಣ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಪಕ್ಷದ ಹಿರಿಯರು ಏನೇ ಮಾತಾಡಿದರೂ ಆಶೀರ್ವಾದ ಅಂದುಕೊಳ್ಳುತ್ತೇನೆ. ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಅವರು ತಮ್ಮ x ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪಕ್ಷದ ಹಿರಿಯರು ಏನೇ ಹೇಳಿಕೆ ನೀಡಿದರೂ ಗಂಭೀರವಾಗಿ ತೆಗೆದುಕೊಳ್ಳುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯುತ್ತೇನೆ. ಕಾರ್ಯಕರ್ತರಿಗೆ ಉತ್ಸಾಹ ತುಂಬುವ ಕೆಲಸ ಮಾಡುತ್ತೇನೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.

Comments (0)
Add Comment