ಮಂಗಳೂರಿನಲ್ಲಿ ನಡೆಯಿತು ‘ಕಾಂತಾರ’ ಸಿನಿಮಾದ ದೃಶ್ಯವನ್ನೇ ನೆನಪಿಸುವ ಘಟನೆ

ಮಂಗಳೂರು: ಭಾರತೀಯ ಚಿತ್ರರಂಗವೇ ಒಮ್ಮೆ ತಿರುಗಿ ನೋಡುವಂತೆ ಮಾಡಿದ ಕನ್ನಡದ ಯಶಸ್ವೀ ಸಿನಿಮಾ ಕಾಂತಾರದಲ್ಲಿ ದೈವ ನರ್ತನದ ಕಾರ್ಯವು ತಂದೆಯ ಬಳಿಕ ಮಗ ಮುಂದುವರಿಸಿಕೊಂಡು ಹೋಗುವ ದೃಶ್ಯವಿದೆ.

ಇದು ತುಳುನಾಡಿನ ದೈವಾರಾಧನೆಗೆ ಸಂಬಂಧಿಸಿದಂತೆ ವಾಸ್ತವಕ್ಕೆ ಅತ್ಯಂತ ಹತ್ತಿರದ ಸನ್ನಿವೇಶವೂ ಹೌದು. ಈ ದೃಶ್ಯವನ್ನೇ ನೆನಪಿಸುವ ಘಟನೆಯೊಂದು  ಎಡಮಂಗಲದಲ್ಲಿ ನಡೆದಿದೆ. ಕಡಬ ತಾಲೂಕಿನ ಎಡಮಂಗಲದ ಶಿರಾಡಿ ದೈವಸ್ಥಾನಕ್ಕೆ ಸಂಬಂಧಪಟ್ಟ ದೈವ ನರ್ತಕ ಕಾಂತು ಅಜಿಲರು ದೈವ ನರ್ತನದಲ್ಲಿದ್ದ ವೇಳೆಯೇ ಅಕಾಲಿಕ ಮೃತಪಟ್ಟಿದ್ದರು.

ಆ ಬಳಿಕ ಗ್ರಾಮದ ಜನತೆ ಹೊಸ ದೈವನರ್ತಕನ ಹುಡುಕಾಟದಲ್ಲಿದ್ದರು. ಅದಕ್ಕಾಗಿ ದೈವಜ್ಞರಿಂದ ಪ್ರಶ್ನೆಯನ್ನು ಇರಿಸಿದ್ದರು. ಪ್ರಶ್ನಾಚಿಂತನೆಯಲ್ಲಿ ಕಾಂತು ಅಜಿಲರ ಮಕ್ಕಳನ್ನೇ ಮುಂದಿನ ದೈವನರ್ತಕರಾಗಿಸಬೇಕು ಎಂದು ಕಂಡುಬಂದಿದೆ. ಅದರಂತೆ ಕಾಂತು ಅಜಿಲರ ಮಕ್ಕಳಾದ ಮೋನಪ್ಪ ಮತ್ತು ದಿನೇಶ್ ರನ್ನು ಮುಂದಿನ ದೈವ ನರ್ತಕರನ್ನಾಗಿ ನೇಮಿಸಲಾಗಿದೆ.

ಇದಕ್ಕೆ ಶಿರಾಡಿ ದೈವದ ಅನುಮತಿಯೂ ದೊರಕಿದೆ. ಶಿರಾಡಿ ದೈವದ ನೇಮೋತ್ಸವದ ದಿನ ಇಬ್ಬರೂ ಯುವಕರನ್ನು ದೈವದ ಮುಂದೆ ನಿಲ್ಲಿಸಲಾಗಿದೆ. ದೈವ ಇಬ್ಬರಿಗೂ ಯಾವ ರೀತಿಯಲ್ಲಿ ದೈವಸೇವೆ ಮಾಡಬೇಕು ಎಂದು ಸವಿವರವಾಗಿ ತಿಳಿಸುವ ಪ್ರಕ್ರಿಯೆ ನಿಜಕ್ಕೂ ರೋಮಾಂಚನಕಾರಿ.

ಈ ವೇಳೆ ದೈವದ ನರ್ತಕರಾಗಿ ಸೇವೆ ಸಲ್ಲಿಸಲಿರುವ ಯುವಕರ ಕಣ್ಣಲ್ಲಿ ಆನಂದಭಾಷ್ಪ ಮೂಡಿತ್ತು. ದೈವನರ್ತಕನ ದೀಕ್ಷೆ ಪಡೆಯುವ ಮೊದಲು ಶುದ್ಧವಾಗಿ ಮಡಿ ಬಟ್ಟೆತೊಟ್ಟು ಸುತ್ತಿ ಮನೆಮಂದಿ ಹಾಗೂ ಗ್ರಾಮದ ಹಿರಿಯರ ಆಶೀರ್ವಾದ ಪಡೆಯುತ್ತಾರೆ. ಆ ಬಳಿಕ ನಾಲ್ವರು, ಒಂಬತ್ತು ದಿಕ್ಕಿಗೆ ಸೇರಿದ ಜನರ ಸಮ್ಮುಖದಲ್ಲಿ ನರ್ತನ ದೀಕ್ಷೆಯನ್ನು ಯುವಕರಿಗೆ ನೀಡಲಾಗುತ್ತದೆ. ದೈವ ತನ್ನ ಅವಾಹನೆಯನ್ನು ಹೊಸದಾಗಿ ನೇಮಕವಾದ ದೈವ ನರ್ತಕರ ಮೂಲಕ ತೋರ್ಪಡಿಸಲಿದೆ ಎನ್ನುವುದು ದೀಕ್ಷೆ ಬೂಳ್ಯದ ಹಿಂದಿರುವ ತತ್ವವಾಗಿದೆ. ಈ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಳ್ಳಲು ಊರ – ಪರವೂರ ದೈವಭಕ್ತರು ಭಾಗವಹಿಸಿದ್ದರು.

Comments (0)
Add Comment