ಮಂಗಳೂರು: ಅನಂತಪುರದ ಮೊಸಳೆಗೆ ಬಬಿಯಾ ನಾಮಕರಣ

ಮಂಗಳೂರು:ಸರೋವರ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಭ್ರಮ ಕಾಠ್ಯಕ್ರಮ ಮತ್ತು ಮಧ್ಯಾಹ್ನ ಭಕ್ತರ ಸಮಾಲೋಚನೆ ಸಭೆ ಜರುಗಿತು. ಈ ಸಂದರ್ಭ ಶ್ರೀ ಕ್ಷೇತ್ರದ ಪರಮ ಪವಿತ್ರ ಸರೋವರದಲ್ಲಿ ಇತ್ತೀಚೆಗೆ ಪ್ರತ್ಯಕ್ಷಗೊಂಡ ಮೂರನೇ ದೇವರ ಮೊಸಳೆಗೆ ಶಾಸ್ರೋಕ್ತವಾಗಿ ವೇದ ಮಂತ್ರಘೋಷಗಳೊಂದಿಗೆ ‘ಬಬಿಯಾ’ ಎಂದು ನಾಮಕರಣ ಮಾಡಲಾಯಿತು. ಕಾರ್ಯಕ್ರಮದಲ್ಲಿ ದೇಗುಲದ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ ದೀಪ ಬೆಳಗಿಸಿ ವಿಧಿವಿಧಾನಗಳನ್ನು ನೆರವೇರಿಸಿದರು. ಧಾರ್ಮಿಕ ಮುಂದಾಳು, ವಕೀಲ ಹಾಗೂ ಕಲಾರತ್ನ ಶಂನಾಡಿಗ ಮುಖ್ಯ ಭಾಷಣ ಮಾಡಿದರು. ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ಸಮಿತಿ ಕಾರಾಧ್ಯಕ್ಷ ಮಾಧವ ಕಾರಂತ ಆಧ್ಯಕ್ಷತೆ ವಹಿಸಿದ್ದರು.ಮಲಬಾರ್ ಕಾಸರಗೋಡು ಮಂಡಳಿಯ ವಲಯ ಅಧ್ಯಕ್ಷ ಕೊಟ್ಟಾರ ವಾಸುದೇವನ್, ವಲಯ ಸದಸ್ಯ ಎಂ.ಶಂಕರ ರೈ ಉಪಸ್ಥಿತರಿದ್ದರು. ಶ್ರೀ ಕ್ಷೇತ್ರದ ಕಾರನಿರ್ವ ಹಣಾಧಿಕಾರಿ ರಮಾನಾಥ ಶೆಟ್ಟಿ ಸ್ವಾಗತಿ ಸಿದರು. ಸತ್ಯಶಂಕರ ಅನಂತಪುರ ವಂದಿಸಿದರು. ಶ್ರೀ ಅನಂತಪದ್ಮನಾಭ ಸ್ವಾಮಿಗೆ ಮಧ್ಯಾಹ್ನ ಮಹಾಪೂಜೆ ನೆರವೇರುತ್ತಿದ್ದ ಸಂದರ್ಭ ಮೂರನೇ ಮೊಸಳೆ ಸರೋವರದ ಗುಹೆಯ ಪರಿಸರದಲ್ಲಿ ಪ್ರತ್ಯಕ್ಷಗೊಂಡಿತು. ಈ ಪುಣ್ಯ ಕ್ಷಣವನ್ನು ನೆರೆದಿದ್ದ ಅಪಾರ ಭಕ್ತಾದಿಗಳು ಕಣ್ಣುಂಬಿಕೊಂಡರು. ಅಲ್ಲದೆ ಶ್ರೀ ದೇವರನ್ನು ಹಾಗೂ ‘ಬಬಿಯಾ’ ದೇವರ ಮೊಸಳೆಯನ್ನು ಮನಸಾರೆ ಧ್ಯಾನಿಸಿ ಧನ್ಯರಾದರು. ಈ ಮಧ್ಯೆ ಭಕ್ತ ಜನರಿಗೆ ಮಧ್ಯಾಹ್ನ ವಿಶೇಷ ಭೋಜನ ವ್ಯವಸ್ಥೆಮಾಡಲಾಗಿತ್ತು. ದೇವರ ನೈವೇದ್ಯ ಮೊಸಳೆಗೆ ಆಹಾರ ಶ್ರೀ ದೇವರ ನೈವೇದ್ಯ ಹಾಗೂ ಪಾಯಸವನ್ನು ಮೂರನೇ ಮರಿ ಮೊಳಗೆ ಆಹಾರವಾಗಿ ನೀಡಲು ಶ್ರೀ ಕ್ಷೇತ್ರದ ತಂತ್ರಿವರ್ಯರು ನಿರ್ದೇಶಿಸಿದರು. ಈ ಹಿಂದಿನಿಂದಲೂ ದೇವರ ಪೂಜೆ ಬಳಿಕ ನೈವೇದ್ಯವನ್ನು ಶ್ರದಾಭಕ್ತಿಯಿಂದ ಮೊಸಳೆಗೆ ಆಹಾರವಾಗಿ ನೀಡಲಾಗುತ್ತಿದ್ದು, ಅದೇ ವ್ಯವಸ್ಥೆಯನ್ನು ಮೂರನೇ ಮೊಸಳೆ ಬಬಿಯಾಗೂ ಮುಂದುವರಿಸಲು ನಿರ್ಧರಿಸಲಾಯಿತು. ಅಲ್ಲದೆ ಮೊಸಳೆ ನೈವೇದ್ಯ ಎಂಬ ವಿಶೇಷ ಸೇವೆಯನ್ನು ಶ್ರೀ ಕ್ಷೇತ್ರದಲ್ಲಿ ಮುಂದುವರಿಸಲು ತೀರ್ಮಾನಿಸಲಾಯಿತು. ಆನಂತಪುರ ದೇವಸ್ಥಾನದ ಒಂದನೇ ಮೊಸಳೆ ಹಾಗೂ ಎರಡನೇ ಮೊಸಳೆಗೂ ‘ಬಬಿಯಾ’ ಎಂದೇ ಹೆಸರಿದ್ದು, ಶ್ರೀ ದೇವರ ನೈವೇದ್ಯವೇ ಆಹಾರವಾಗಿತ್ತು.

Comments (0)
Add Comment