ಮಂಗಳೂರು : ಯಾವುದೇ ತನಿಖೆಗೂ ನಾವು ಸಿದ್ಧ – ಸೌಜನ್ಯಾ ಪ್ರಕರಣದ ಬಗ್ಗೆ ಮೌನ ಮುರಿದ ವೀರೇಂದ್ರ ಹೆಗ್ಗಡೆ

ಮಂಗಳೂರು : ಸೌಜನ್ಯ ಪ್ರಕರಣದಲ್ಲಿ ಧರ್ಮಸ್ಥಳದ ಅವಹೇಳನ ಹಿನ್ನಲೆಯಲ್ಲಿ ನಡೆದ ಧರ್ಮಸಂರಕ್ಷಣಾ ರಥಯಾತ್ರೆಯು ಕೊಲ್ಲೂರಿನಿಂದ ಆರಂಭವಾಗಿ ಧರ್ಮಸ್ಥಳದಲ್ಲಿ ಸಮಾಪನಗೊಂಡಿತು. ಸಾವಿರ ಸಾವಿರ ಮಂದಿ ಈ ಧರ್ಮಸಂರಕ್ಷಣಾ ರಥಯಾತ್ರೆಯಲ್ಲಿ ಪಾಲ್ಗೊಂಡರು. ಶ್ರೀಕ್ಷೇತ್ರ ಧರ್ಮಸ್ಥಳದ ಮುಂಭಾಗ ಅಳವಡಿಸಿದ ಸಮಾಪನ ವೇದಿಕೆಯಲ್ಲಿ ಅನೇಕ ಸ್ವಾಮೀಜಿಗಳು ಸೇರಿದಂತೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಭಾಗವಹಿಸಿದ್ದರು. ಸಮಾಪನ ವೇದಿಕೆಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಸೇರಿರುವ ಭಕ್ತರನ್ನು ಧರ್ಮ ಸೈನಿಕರೆಂದು ಉಲ್ಲೆಖಿಸಿ ಸೌಜನ್ಯ ಪ್ರಕರಣದ ಆರೋಪಗಳ ಬಗ್ಗೆ ಮೌನ ಮುರಿದು ಮಾತನಾಡಿದರು. ಯಾವುದೇ ರೀತಿಯ ತನಿಖೆಯಾಗಲಿ ನಾವೂ ಸಿದ್ಧ,‌ ದಾಖಲೆಯಿಲ್ಲದೆ ಆರೋಪ ಮಾಡುತ್ತಿದ್ದಾರೆ. ನಿಮ್ಮ ದೀಕ್ಷೆಯಿಂದ ಈ ಎಲ್ಲಾ ಕಷ್ಟಗಳೂ ದೂರವಾಗಲಿ. ಧರ್ಮಸ್ಥಳಕ್ಕೆ ಆಪತ್ತು ಬಂದಾಗ ನೀವು ಕೈಗೊಂಡ ಈ ಪ್ರಾರ್ಥನೆಯನ್ನು ಸ್ವಾಮಿಯ ಪಾದಕ್ಕೆ ಅರ್ಪಿಸುತ್ತೇನೆ ಎಂದು ಡಾ. ವೀರೇಂದ್ರ ಹೆಗ್ಗಡೆ ಹೇಳಿದರು. ಧರ್ಮಸ್ಥಳದಲ್ಲಿ ಹೆಗ್ಗಡೆ ಶಾಂತವಾಗಿದ್ದಾರೆ ಅಂದರೆ ಶ್ರೀ ಮಂಜುನಾಥ ಸ್ವಾಮಿ, ಶ್ರೀ ಚಂದ್ರನಾಥ ಸ್ವಾಮಿ ಕಾರಣ. ದುಷ್ಟ ಶಕ್ತಿಗಳು ವಿಜೃಂಭಿಸುತ್ತಿವೆ, ನೀವೇ ಶಿಷ್ಟ ರಕ್ಷಣೆಯನ್ನು ಮಾಡಬೇಕು. ಕ್ಷೇತ್ರದ ಕಾರ್ಯವನ್ನು ಜನತೆ ಮೆಚ್ಚಿದೆ. ಆದ್ದರಿಂದ ಇಂದು ಸಾವಿರಾರು ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸಿದ್ದೀರಿ. ನಮ್ಮ ವಾಹನವನ್ನು ಅಪೇಕ್ಷಿಸದೆ ನಿಮ್ಮ ಪರವಾಗಿ ಇದ್ದೇವೆ ಎಂದು ಬೆಂಬಲ ನೀಡಿದ್ದೀರಿ ಎಂದರು. ದೇಶವನ್ನ ಹಾಳು ಮಾಡಬೇಕಾದಲ್ಲಿ ಮೊದಲು ಸಂಸ್ಕೃತಿಯನ್ನು ನಾಶ ಮಾಡುತ್ತಾರೆ. ನಮ್ಮ ಕ್ಷೇತ್ರಕ್ಕೆ ಬಂದ ಅಪಾಯ ಬೇರೆ ಕ್ಷೇತ್ರಗಳಿಗೂ ಬರಬಹುದು. ವಿಷವನ್ನು ಸೇವಿಸುವ ಶಕ್ತಿ ಎಲ್ಲರಿಗೂ ಬರುವುದಿಲ್ಲ. ಇದು ದೇವರ ಪರೀಕ್ಷೆ, ಮಳೆ ಬರುತ್ತಿದೆ ಆದರೆ ಯಾರು ಓಡುತ್ತಿಲ್ಲ ನಿಂತಿದ್ದೀರಿ. ವೈಯುಕ್ತಿಕ ನಿಂದನೆಯಿಂದ ಸಂಸ್ಕೃತಿ ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ. ಎಲ್ಲರೂ ಸ್ವಾಸ್ತ್ಯ ಸಂಕಲ್ಪವನ್ನ ಮಾಡಬೇಕು ಎಂದರು.‌

Comments (0)
Add Comment