ಮಂಗಳೂರು : ಸ್ಪೀಕರ್ ಸ್ಥಾನಕ್ಕೆ ಧರ್ಮದ ಬಣ ಹಚ್ಚಿ ಅಧಿವೇಶನದಲ್ಲಿ ಹೇಗೆ ಭಾಗವಹಿಸುತ್ತಾರೆ ನೋಡುತ್ತೇವೆ – ವಿಜಯೇಂದ್ರ ಸವಾಲು

ಮಂಗಳೂರು : ವಕ್ಫ್ ಸಚಿವ ಜಮೀರ್ ಅಹಮ್ಮದ್ ರನ್ನು ರಸ್ತೆಯಲ್ಲಿ ಓಡಾಡಲು ನಾವು ಬಿಟ್ಟಿರೋದೇ ಹೆಚ್ಚು, ಸ್ಪೀಕರ್ ಸ್ಥಾನಕ್ಕೆ ಜಾತಿ ಧರ್ಮ ಬಣ ಹಚ್ಚಿ ತಲೆ ತಗ್ಗಿಸುವ ಕೆಲಸ ಮಾಡಿದ್ದಾರೆ. ಇಷ್ಟು ಹೊತ್ತಿಗೆ ಅವರಿಂದ ಸಿಎಂ ರಾಜಿನಾಮೆ ತೆಗೆದುಕೊಳ್ಳಬೇಕಿತ್ತು. ಮುಂದಿನ ಅಧಿವೇಶನದಲ್ಲಿ ಹೇಗೆ ಭಾಗವಹಿಸುತ್ತಾರೆ ನೋಡುತ್ತೇವೆ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ‌.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಜನರಿಗೆ ಗ್ಯಾರಂಟಿ ಭರವಸೆ ನೀಡಿ ಕಣ್ಣಿಗೆ ಮಣ್ಣೆರಚಿ ಬಹುಮತ ಪಡೆದಿದೆ. ಇದೀಗ ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಅದನ್ನು ನಿಭಾಯಿಸಲು ಸರ್ಕಾರ ವಿಫಲವಾಗಿದೆ. ಉಸ್ತುವಾರಿ ಸಚಿವರು ಜಿಲ್ಲಾ ಪ್ರವಾಸ ಮಾಡಿಲ್ಲ, ಅಧಿಕಾರಿಗಳ ಸಭೆ ಕೂಡ ಕರೆದಿಲ್ಲ. ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಬರದ ವಿಚಾರ ಮಾತನಾಡದೆ ಲೋಕಸಭಾ ಚುನಾವಣಾ ಗೆಲ್ಲುವ ಬಗ್ಗೆ ಚರ್ಚೆ ನಡೆಯುತ್ತಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರು, ಬಡವರು, ದಲಿತರ ವಿರೋಧಿ ಸರ್ಕಾರ. ಜನಪ್ರಿಯತೆ ಕಳೆದುಕೊಂಡ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಎಂದು ಹೇಳಿದರು. ರೈತರು ಪರದಾಡುತ್ತಿರುವ ಈ ಸಂದರ್ಭದಲ್ಲಿ ಬೋರ್ಡ್ ಚುನಾವಣೆ ಬಗ್ಗೆ ಮಾತಾಡುತ್ತಾರೆ. ಬಿಜೆಪಿ ಸರಿಯಾದ ರೀತಿಯಲ್ಲಿ ವಿದ್ಯುತ್ ನೀಡುತ್ತಿತ್ತು. ಈಗ ವಿದ್ಯುತ್ ಅಭಾವ ಸೃಷ್ಟಿಯಾಗಿ ಎರಡು ತಾಸು ಕೂಡಾ ವಿದ್ಯುತ್ ಸಿಗುತ್ತಿಲ್ಲ. ಸರ್ಕಾರ ಬಂದು ಆರು ತಿಂಗಳು ಆದರೂ ಅಧಿಕಾರ ಹಿಡಿದವರು ಮೋಜಿನಲ್ಲಿ ಮುಳುಗಿದ್ದಾರೆ. ರಾಜ್ಯ ಸರ್ಕಾರ ಜವಾಬ್ದಾರಿ ಮರೆತಿದೆ. ಮುಂದೆ ಕಿವಿ ಹಿಂಡುವ ಕೆಲಸ ಮಾಡುತ್ತೇವೆ‌‌. ಕಾಂಗ್ರೆಸ್ ಹಿಂದೆ ಅಧಿಕಾರದಲ್ಲಿದ್ದಾಗ ಬಹಳಷ್ಟು ಹಿಂದೂ ಕಾರ್ಯಕರ್ತರ ಹತ್ಯೆಯಾಗಿತ್ತು. ಮುಂದೆ ಅದು ಆಗದಂತೆ ಎಚ್ಚರ ವಹಿಸುತ್ತೇವೆ. ಅದಕ್ಕಾಗಿ ನಾವೆಲ್ಲರೂ ಒಗಟ್ಟಾಗಿ ಒಂದಾಗಿ ಲೋಕಸಭಾ ಚುನಾವಣೆ ಎದುರಿಸಿ 28 ಲೋಕಸಭಾ ಕ್ಷೇತ್ರವನ್ನು ಚುನಾವಣೆ ಗೆದ್ದು ಮೂರನೇ ಬಾರಿಗೆ ಮೋದಿಯವರನ್ನು ಪ್ರಧಾನಮಂತ್ರಿ ಮಾಡುತ್ತೇವೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

Comments (0)
Add Comment