ಮಣಿಪುರ ಬಿಕ್ಕಟ್ಟು : ಪ್ರಧಾನಿ ಮೋದಿ ಪರ ಧ್ವನಿ ಎತ್ತಿದ ಯುಎಸ್​ ಗಾಯಕಿ

ವಾಷಿಂಗ್ಟನ್‌ : ಮಣಿಪುರ ಹಿಂಸಾಚಾರದ ಕುರಿತು ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿ ಪರ ಯುಎಸ್​ ಗಾಯಕಿ ಧ್ವನಿ ಎತ್ತಿ ವಿಪಕ್ಷಗಳಿಗೆ ತಿರುಗೇಟು ಕೊಟ್ಟಿದ್ದಾರೆ. ಇನ್ನು ವಿಪಕ್ಷಗಳ ವಾಗ್ದಾಳಿಯ ಮಧ್ಯೆಯೇ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ , “ಮಣಿಪುರ ನಮ್ಮ ಅವಿಭಾಜ್ಯ ಅಂಗ. ಮಣಿಪುರದಲ್ಲಿ ಶೀಘ್ರವೇ ಶಾಂತಿ ನೆಲೆಸುತ್ತದೆ. ಜನರ ರಕ್ಷಣೆಗೆ ನಾವು ಬದ್ಧ” ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಅಂತಾರಾಷ್ಟ್ರಿಯ ಖ್ಯಾತಿಯ ಆಫ್ರಿಕನ್​-ಅಮೆರಿಕನ್​ ಗಾಯಕಿ ಮೇರಿ ಮಿಲ್​​ಬೆನ್ ಅವರು ನರೇಂದ್ರ ಮೋದಿ ಬೆಂಬಲಕ್ಕೆ ನಿಂತಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿದ ಮಿಲ್‌ಬೆನ್‌, “ಸತ್ಯ: ಭಾರತ ತನ್ನ ದೇಶದ ನಾಯಕನ ಮೇಲೆ ಆತ್ಮವಿಶ್ವಾಸ ಹೊಂದಿದೆ. ಮಣಿಪುರದ ಮಾತೆಯರು, ಪುತ್ರಿಯರು ಹಾಗೂ ಮಹಿಳೆಯರಿಗೆ ನ್ಯಾಯ ಸಿಗುತ್ತದೆ. ನಿಮ್ಮ ಸ್ವಾತಂತ್ರ್ಯಕ್ಕಾಗಿ ನರೇಂದ್ರ ಮೋದಿ ಅವರು ಎಂದಿಗೂ ಹೋರಾಡುತ್ತಾರೆ. ನರೇಂದ್ರ ಮೋದಿ ಅವರೇ ನಿಮ್ಮ ಮೇಲೆ ವಿಶ್ವಾಸ ಇದೆ. ನಿಮಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು” ಹೇಳಿದ್ದಾರೆ. ಮೇರಿ ಮಿಲ್‌ಬೆನ್‌ ಟ್ವೀಟ್ ಇನ್ನು ಪ್ರತಿಪಕ್ಷಗಳ ವಿರುದ್ಧ ಮೇರಿ ಮಿಲ್‌ಬೆನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ವಾಸ್ತವ: ಸಾಂಸ್ಕೃತಿಕ ಪರಂಪರೆಯನ್ನು ಅಗೌರವದಿಂದ ಕಾಣುವ, ದೇಶದಲ್ಲಿ ಮಕ್ಕಳನ್ನು ರಾಷ್ಟ್ರಗೀತೆ ಹಾಡುವುದರಿಂದ ತಡೆಯುವ ಹಾಗೂ ವಿದೇಶದಲ್ಲಿ ತಮ್ಮ ದೇಶದ ಬಗ್ಗೆ ಕೆಟ್ಟದಾಗಿ ಮಾತನಾಡುವ ಪಕ್ಷದ್ದು ಎಂದಿಗೂ ನಾಯಕತ್ವ ಎನಿಸಿಕೊಳ್ಳುವುದಿಲ್ಲ. ಇದು ಮೌಲ್ಯ ರಹಿತವಾದದ್ದು” ಎಂದು ಪರೋಕ್ಷವಾಗಿ ಕಾಂಗ್ರೆಸ್‌ಗೆ ಮೇರಿ ಮಿಲ್‌ಬೆನ್‌ ಕುಟುಕಿದ್ದಾರೆ. ಕಳೆದ ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದಾಗ ವೇದಿಕೆ ಮೇಲೆ ಮೇರಿ ಮಿಲ್‌ಬೆನ್‌ ಅವರು ಭಾರತದ ರಾಷ್ಟ್ರಗೀತೆ ಹಾಡಿದ್ದರು. ಈ ವಿಡಿಯೊ ಭಾರಿ ವೈರಲ್‌ ಆಗಿತ್ತು.

Comments (0)
Add Comment