ಮತ್ತೆ ನಂದಿನಿ ಹಾಲಿನ ದರ ಏರಿಕೆ?

ಬೆಳಗಾವಿ: ರಾಜ್ಯದ ಜನತೆಗೆ ಹೊಸ ವರ್ಷದಲ್ಲಿ ನಂದಿನಿ ಹಾಲು, ಮೊಸರು ದರ ಹೆಚ್ಚಳ ಶಾಕ್‌ ನೀಡುವುದು ಖಚಿತವಾಗಿದೆ. ರಾಜ್ಯ ಸರ್ಕಾರ ಇದಕ್ಕೆ ಪ್ಲಾನ್‌ ಮಾಡುತ್ತಿದ್ದು, ಈ ಸಂಬಂಧ ಬೆಳಗಾವಿ ಅಧಿವೇಶನದಲ್ಲಿ ಸುಳಿವು ನೀಡಿದೆ.

ನಂದಿನಿ ಹಾಲಿನ ದರ ಹೆಚ್ಚಳ ಕುರಿತು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರ ಪ್ರಶ್ನೆಗೆ ಪಶು ಸಂಗೋಪನೆ ಖಾತೆ ಸಚಿವ ಕೆ.ವೆಂಕಟೇಶ್ ಉತ್ತರ ನೀಡಿದ್ದು, ಹಾಲಿನ ದರ ಏರಿಕೆ ಪ್ರಸ್ತಾಪ ಪರಿಶೀಲನೆಯಲ್ಲಿದೆ ಎಂದು ತಿಳಿಸಿದ್ದಾರೆ. ಇತರೆ ಖಾಸಗಿ ಬ್ರ್ಯಾಂಡ್‌ಗಳ ದರಕ್ಕಿಂತ ನಂದಿನಿ ಬ್ರ್ಯಾಂಡ್‌ ಗಳ ದರ 10-12 ರೂ. ಕಡಿಮೆ ಇದೆ. ಹಾಲು ಉತ್ಪಾದಕರು, ಒಕ್ಕೂಟಗಳು ನಷ್ಟದಲ್ಲಿದ್ದು, ಗ್ರಾಹಕರಿಗೆ ಹೊರೆಯಾಗದಂತೆ ದರ ಹೆಚ್ಚಿಸುವುದಾಗಿ ತಿಳಿಸಿದ್ದಾರೆ.

ಕಳೆದ ಆಗಸ್ಟ್ 1ರಿಂದ ಹಾಲಿನ ದರದಲ್ಲಿ 3 ರೂ.ಗಳಷ್ಟು ಹೆಚ್ಚಳ ಮಾಡಲಾಗಿತ್ತು. ಮೊಸರಿನ ದರ ಸೇರಿದಂತೆ ಇನ್ನಿತರ ಉತ್ಪನ್ನಗಳ ದರವನ್ನು ಏರಿಸಲಾಗಿತ್ತು. ಮತ್ತೆ ನಾಲ್ಕೇ ತಿಂಗಳಲ್ಲಿ ಮತ್ತೊಂದು ದರ ಹೆಚ್ಚಳ ಶಾಕ್ ಕೊಡಲು ಸರ್ಕಾರ ಮುಂದಾಗಿದೆ. ನಂದಿನಿ ಹಾಲಿನ ದರ ಏರಿಕೆ ಮಾಡುವ ಬಗ್ಗೆ ಕೆಎಂಎಫ್‌ ಚಿಂತನೆ ನಡೆಸಿದೆ. ಆದರೆ ಎಷ್ಟು ರೂಪಾಯಿ ಏರಿಕೆ ಆಗಲಿದೆ ಎಂಬುದು ಮಾತ್ರ ಇನ್ನೂ ನಿರ್ಧಾರ ಆಗಿಲ್ಲ.

ಕರ್ನಾಟಕ ಹಾಲು ಮಾರಾಟ ಮಂಡಳಿ ಕಳೆದ ಬಾರಿ ತೀರ್ಮಾನ ತೆಗೆದುಕೊಳ್ಳಲು 14 ಹಾಲು ಒಕ್ಕೂಟಗಳ ಮನವಿ ಕಾರಣವಾಗಿತ್ತು. ಕಳೆದ ಬಾರಿ 5 ರೂಪಾಯಿ ಹೆಚ್ಚಳ ಮಾಡುವ ಪ್ರಸ್ತಾಪ ಇದ್ದರೂ, ವ್ಯಾಪಕ ವಿರೋಧ ವ್ಯಕ್ತವಾಗಿದ್ದರಿಂದ 3 ರೂಪಾಯಿ ಹೆಚ್ಚಳ ಮಾಡಿ ಆದೇಶಿಸಲಾಗಿತ್ತು. ಈ 3 ರೂಪಾಯಿಯನ್ನು ನೇರವಾಗಿ ರೈತರಿಗೆ ನೀಡುವಂತೆ ಸೂಚಿಸಲಾಗಿತ್ತು. ಇದು ಹಾಲು ಒಕ್ಕೂಟಗಳಿಗೆ ಹೊಡೆತ ನೀಡಿತ್ತು. ಹಾಲು ಒಕ್ಕೂಟಗಳಿಗೆ ಆಗುತ್ತಿದ್ದ ನಷ್ಟವನ್ನು ಸರಿದೂಗಿಸಲು ದರ ಪರಿಷ್ಕರಣೆ ಅನಿವಾರ್ಯ ಎಂದು ಕೆಎಂಎಫ್‌ ಗೆ ಮನವಿ ಸಲ್ಲಿಸಲಾಗಿತ್ತು. ಹೀಗಾಗಿ ಉನ್ನತ ಮಟ್ಟದಲ್ಲಿ ದರ ಏರಿಕೆ ಚರ್ಚೆಗಳು ನಡೆದಿವೆ ಎನ್ನಲಾಗಿದೆ.

ಈ ಸಂಬಂಧ ಜನವರಿಯಲ್ಲಿ ಹಾಲು ಒಕ್ಕೂಟಗಳ ಸಭೆ ಕರೆಯಲು ಕೆಎಂಎಫ್‌ ಚಿಂತನೆ ನಡೆಸಿದೆ. ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿ ವರದಿ ಸಿದ್ಧಪಡಿಸಿ, ಬಳಿಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಆಲೋಚನೆಯಲ್ಲಿ ಕೆಎಂಎಫ್ ಇದೆ ಎನ್ನಲಾಗಿದೆ.

Comments (0)
Add Comment