ಮತ್ತೆ ಸ್ಯಾಟಲೈಟ್ ಫೋನ್ ಸದ್ದು: ಯಾದಗಿರಿಯಿಂದ ಪಾಕಿಸ್ತಾನಕ್ಕೆ ಕರೆ ಶಂಕೆ

ಯಾದಗಿರಿ: ರಾಜ್ಯದಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಸದ್ದು ಮಾಡಿದ್ದು,ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶೆಳ್ಳಗಿಯಿಂದ ನಿಷೇಧಿತ ಸ್ಯಾಟ್‌ ಲೈಟ್‌ ಮೂಲಕ ವಿದೇಶಕ್ಕೆ ಕರೆ ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 17ರಂದು ನಸುಕಿನ ಜಾವ 3ಗಂಟೆ ಸುಮಾರಿಗೆ ಸ್ಯಾಟಲೈಟ್ ಫೋನ್ ನಿಂದ ಕರೆ ಹೋಗಿದೆ ಎಂದು ತಿಳಿದುಬಂದಿದೆ.

ಅನಾಮಧೇಯ ಸ್ಥಳಕ್ಕೆ ನಿಷೇಧಿತ ‘ತುರಾಯಾ’ ಸ್ಯಾಟಲೈಟ್ ಫೋನ್ ಉಪಕರಣ ಮೂಲಕ ಕರೆ ಹೋಗಿರುವ ಬಗ್ಗೆ ಅರಿತು ಕೇಂದ್ರ ಸಂಸ್ಥೆಗಳು ಇಲ್ಲಿಗೆ ಮಾಹಿತಿ ರವಾನಿಸಿವೆ. ತಕ್ಷಣವೇ ಈ ಬಗ್ಗೆ ಜಾಗೃತರಾದ ಅಧಿಕಾರಿಗಳು ಜಿಪಿಎಸ್ ಲೊಕೇಶನ್ ಆಧಾರದ ಮೇಲೆ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶೆಳ್ಳಗಿಯಿಂದ ನಿಷೇಧಿತ ಸ್ಯಾಟ್‌ ಲೈಟ್‌ ಫೋನ್ ಮೂಲಕ ವಿದೇಶಕ್ಕೆ ಕರೆ ಹೋಗಿರುವುದು ಖಚಿತವಾಗಿದೆ.

ಆದರೆ, ಇಂತಹುದ್ದೇ ಕಡೆಗೆ ಕರೆ ಹೋಗಿದೆ ಎಂದು ಗೊತ್ತಾಗಿಲ್ಲವಾದರೂ, ಪಾಕಿಸ್ತಾನಕ್ಕೆ ಹೋಗಿರುವುದು ಶಂಕೆ ವ್ಯಕ್ತವಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ, 2021ರ ಏಪ್ರಿಲ್‌ ನಲ್ಲಿ ಯಾದಗಿರಿಗೆ ಸಮೀಪದ ಹೆಡಗಿಮುದ್ರಾ ಗ್ರಾಮ ಹೊರವಲಯದಿಂದ ನಿಷೇಧಿತ ಸ್ಯಾಟಲೈಟ್ ಫೋನ್ ಮೂಲಕ ಪಾಕಿಸ್ತಾನಕ್ಕೆ ಕರೆ ಹೋಗಿದ್ದರಿಂದ, ಆಂತರಿಕ ಭದ್ರತಾ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತ್ತು. ಅಲ್ಲದೇ, ಯಾದಗಿರಿಯಲ್ಲಿ ಮೋಸ್ಟ್ ವಾಂಟೆಂಡ್ ಉಗ್ರರು ಅಡಗಿದ್ದರು ಎಂಬ ಸುಳಿವಿನ ಮೇರೆಗೆ 2014ರಲ್ಲಿ ಮುಂಬೈ ಹಾಗೂ ಹೈದರಾಬಾದ್‌ ನಿಂದ ಎನ್‌ ಐಎ ಅಧಿಕಾರಿಗಳ ತಂಡ ಭೇಟಿ ನೀಡಿ, ಹಲವರ ವಿಚಾರಣೆಯನ್ನೂ ನಡೆಸಿತ್ತು.

Comments (0)
Add Comment