ಮಿಚಾಂಗ್ ಅಬ್ಬರಕ್ಕೆ ಮುಳುಗಿದ ಚೆನ್ನೈ

ಚೆನ್ನೈ  : ಮಿಚಾಂಗ್ ಚಂಡಮಾರುತದ ತಮಿಳುನಾಡಿನಲ್ಲಿ ಜಲ ಪ್ರಳಯವನ್ನೇ ಸೃಷ್ಠಿಸಿದೆ. ಅದರಲ್ಲೂ ಚೆನ್ನೈ ಮಳೆಯಿಂದಾಗಿ ಸಂಪೂರ್ಣ ಮುಳುಗಿ ಹೋಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ರೈಲು ವಿಮಾನ ಸೇವೆಗಳು ಸಂಪೂರ್ಣ ನಿಂತು ಹೋಗಿವೆ. ಇಂದು ಚೆನ್ನೈನಲ್ಲಿ ಸುರಿದ ಮಳೆಯು 2015ರ ಪ್ರವಾಹದ ನಂತರ ಸುರಿದ “ಅ ತಿದೊಡ್ಡ ಮಳೆ”ಯಾಗಿದೆ ಎಂದು ಹೇಳಲಾಗುತ್ತಿದೆ.

ರಾಜಧಾನಿ ಚೆನ್ನೈ ಮತ್ತು ನೆರೆಯ ಮೂರು ಜಿಲ್ಲೆಗಳಲ್ಲಿ ಮಿಚಾಂಗ್ ತೀವ್ರ ಪರಿಣಾಮ ಬೀರಿದೆ. ಕಳೆದೆರಡು ದಿನದಲ್ಲಿ 40 ಸೆಂ.ಮೀ ಮಳೆ ಆಗಿದೆ. ಚೆನ್ನೈ ವಿಮಾನ ನಿಲ್ದಾಣ, ಪಾಲಿಕೆ ಆವರಣ, ನಗರದ ಬಹುತೇಕ ರಸ್ತೆಗಳು ಜಲಾವೃತಗೊಂಡಿವೆ. ಜನಜೀವನ ನಿಯಂತ್ರಣ ತಪ್ಪಿದೆ. ಇನ್ನು ಮಳೆಗೆ ಮಹಿಳೆ ಸೇರಿ ಐವರು ಸಾವಿಗೀಡಾಗಿದ್ದಾರೆ. ಈ ಪೈಕಿ ಇಬ್ಬರು ವಿದ್ಯುತ್ ತಂತಿ ಸಂಪರ್ಕದಿಂದ ಸಾವಿಗೀಡಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಚೆನ್ನೈನ ಪೆರುಂಗುಡಿಯಲ್ಲಿ ಗರಿಷ್ಠ ಅಂದರೆ 29 ಸೆಂ.ಮೀ ಮಳೆ ಪ್ರಮಾಣ ದಾಖಲಾಗಿದ್ದರೆ, ತಿರುವಲ್ಲೂರು ಜಿಲ್ಲೆಯ ಅವಡಿಯಲ್ಲಿ 28 ಸೆಂ.ಮೀ., ಚೆಂಗಲ್‌ಪೇಟ್‌ನ ಮಾಮಲ್ಲಪುರಂನಲ್ಲಿ 22 ಸೆಂ.ಮೀ ಮಳೆ ಸುರಿದಿರುವುದು ದಾಖಲಾಗಿದೆ.
ರಾಜಧಾನಿಯಲ್ಲಿ ಲಕ್ಷಾಂತರ ನಿವಾಸಿಗಳು ಭಾನುವಾರದಿಂದ ಸೋಮವಾರ ಸಂಜೆಯವರೆಗೂ ಮನೆಗಳಲ್ಲಿಯೇ ಬಂದಿಯಾಗಿದ್ದರು. ಈ ಹಿಂದೆ 2015ರಲ್ಲಿ ಮೂಡಿದ್ದ ಮುಳುಗಡೆ ಭೀತಿ ಮತ್ತೆ ನಾಗರಿಕರನ್ನು ಕಾಡುತ್ತಿದೆ. ಹೀಗಾಗಿ, ಅಗತ್ಯ ವಸ್ತುಗಳು, ಕುಡಿಯುವ ನೀರಿನ ಸಂಗ್ರಹಕ್ಕೆ ಜನರು ಒತ್ತು ನೀಡಿದ್ದು, ಇವುಗಳಿಗೆ ಬೇಡಿಕೆ ಹೆಚ್ಚಿದೆ. ಸೋಮವಾರ ತಡರಾತ್ರಿಯವರೆಗೂ ಮಳೆ ಬೀಳಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದು, ಸಹಜ ಸ್ಥಿತಿಗೆ ಮರಳಲು ಸ್ವಲ್ಪ ಸಮಯ ಹಿಡಿಯಲಿದೆ.

ಚೆನ್ನೈನ ವಿಮಾನ ನಿಲ್ದಾಣ ಸೇರಿದಂತೆ ಬಹುತೇಕ ಭಾಗಗಳು ಜಲಾವೃತವಾಗಿವೆ. ರೈಲು-ವಿಮಾನ ಸಂಚಾರ ಸಹ ಸ್ಥಗಿತಗೊಂಡಿದೆ. ಮಿಚಾಂಗ್ ಚಂಡಮಾರುತದ ಪರಿಣಾಮ ತಮಿಳುನಾಡಿನ ಹಲವು ಭಾಗಗಳಲ್ಲಿ ಡಿಸೆಂಬರ್ 5ರವರೆಗೆ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಎಚ್ಚರಿಕೆ ನೀಡಿದೆ.

Comments (0)
Add Comment