ಮುಂಗಡವಾಗಿ 55 ಕೋಟಿ ರೂ. ಪಡೆದ ಈ ನಿರ್ದೇಶಕ

ಸ್ಕ್ರಿಪ್ಟ್ ಸಿದ್ಧವಾಗದೆಯೇ ಮುಂದಿನ ಸಿನಿಮಾಕ್ಕಾಗಿ ಮುಂಗಡವಾಗಿ 55 ಕೋಟಿ ರೂಪಾಯಿ ಪಡೆದ ಚಿತ್ರ ನಿರ್ದೇಶಕೊರೊಬ್ಬರು ಈಗ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್​ನಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿರುವ ಎಸ್​.ಎಸ್​. ರಾಜಮೌಳಿ, ಪ್ರಶಾಂತ್​ ನೀಲ್​ ಮತ್ತು ರೋಹಿತ್​ ಶೆಟ್ಟಿ ಇವರಲ್ಲಿ ಯಾರಾದರೊಬ್ಬರು ಆಗಿರಬಹುದು ಎಂದು ನೀವು ಊಹಿಸಿದ್ದರೆ ಅದು ತಪ್ಪು. ಯಾಕೆಂದರೆ ಇವರು ಸ್ಟಾರ್ ನಿರ್ದೇಶಕರಲ್ಲ. ಆದರೆ ಸ್ಟಾರ್ ನಿರ್ದೇಶಕರಿಗೆ ಪೈಪೋಟಿ ನೀಡಬಲ್ಲವರು.

ಸ್ಟಾರ್​ ನಟರಷ್ಟೇ ಸ್ಟಾರ್​​ಡಮ್​ ಹೊಂದಿರುವ ಹಾಗೂ ದುಬಾರಿ ನಿರ್ದೇಶಕರು ಎಂಬ ಹೆಗ್ಗಳಿಕೆಯನ್ನು ಪಡೆದಿರುವ ರಾಜಮೌಳಿ, ಪ್ರಶಾಂತ್, ರೋಹಿತ್ ಅವರ ಸಾಲಿನಲ್ಲಿ ಈಗ ಮತ್ತೊಂದು ಹೆಸರು ಕೇಳಿ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಇವರ ಹೆಸರು ಈಗ ಟ್ರೆಂಡಿಂಗ್​ನಲ್ಲಿದೆ.

ಸೂಪರ್​ ಸ್ಟಾರ್​ ರಜನಿಕಾಂತ್​ ಅಭಿನಯದ ಸೂಪರ್​ ಹಿಟ್​ “ಜೈಲರ್” ಸಿನೆಮಾದ ನಿರ್ದೇಶಕ​ ನೆಲ್ಸನ್​ ದಿಲೀಪ್​ ಕುಮಾರ್ ತಮ್ಮ ಎರಡನೇ ಭಾಗದ ಸಿನೆಮಾಕ್ಕಾಗಿ ಸ್ಕ್ರಿಪ್ಟ್​​​ ಇಲ್ಲದೆಯೇ 55 ಕೋಟಿ ರೂಪಾಯಿ ಮುಂಗಡ ಹಣವನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದ್ದು ಈ ಸುದ್ದಿಯೇ ಈಗ ದೊಡ್ಡ ಸದ್ದು ಮಾಡುತ್ತಿದೆ

ಜೈಲರ್​ ಸಿನೆಮಾ ಹಿಟ್​ ಆದ ಬಳಿಕ ಅದೇ ಸಿನೆಮಾ ಎರಡನೇ ಭಾಗದಲ್ಲಿ ಬರಲಿದೆ ಎನ್ನಲಾಗುತ್ತಿದೆ. ಸಿನೆಮಾ ವಿಮರ್ಶಕ ಮನೊಬಾಲ ವಿಜಯ್​ಬಾಲನ್​ ಅವರು ಈ ಕುರಿತು ಟ್ವೀಟ್​ ಮಾಡಿದ್ದರು.

ರಜನಿಕಾಂತ್ ನಟನೆಯ ನೆಲ್ಸನ್ ನಿರ್ದೇಶನದ ಜೈಲರ್ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿಸುಮಾರು 600 ಕೋಟಿ ರೂ. ಸಂಗ್ರಹಿಸಿ ದಾಖಲೆ ನಿರ್ಮಿಸಿತ್ತು. ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸಿದ್ದು, ಚಿತ್ರ ಯಶಸ್ವಿಯಾದ ಬಳಿಕ ಕಲಾನಿಧಿ ಮಾರನ್ ಅವರು ರಜನಿಕಾಂತ್, ನೆಲ್ಸನ್ ಮತ್ತು ಅನಿರುದ್ಧ್ ಅವರಿಗೆ ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದರು ಎನ್ನಲಾಗಿದೆ.

ಒಂದು ವೇಳೆ ನೆಲ್ಸನ್​​ ದಿಲೀಪ್​ ಕುಮಾರ್​ ಅವರು ಜೈಲರ್​ 2 ಸಿನೆಮಾ ಮಾಡಿದರೆ ಭಾರತೀಯ ಸಿನೆಮಾ ರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಿರ್ದೇಶಕರು ಎಂಬ ಖ್ಯಾತಿ ಪಡೆಯಲಿದ್ದಾರೆ. ಆದರೆ ಈ ಸಿನೆಮಾ ಕ್ಕಾಗಿ ಅವರು 55 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎನ್ನುವುದಕ್ಕೆ ಯಾವುದೇ ಅಧಿಕೃತ ದೃಢೀಕರಣ ಸಿಕ್ಕಿಲ್ಲ.

Comments (0)
Add Comment