ಮುಖ್ಯಮಂತ್ರಿ ಪೂರ್ವಾನುಮತಿ ಪಡೆದು ವರ್ಗಾವಣೆ – ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಯಾವುದೇ ಇಲಾಖೆಯಲ್ಲಿ ವರ್ಗಾವಣೆ ಮಾಡುವುದಾದರೆ ಇನ್ನು ಮುಂದೆ ಮುಖ್ಯಮಂತ್ರಿಯವರ ಪೂರ್ವಾನುಮತಿ ಪಡೆಯುವುದನ್ನು ರಾಜ್ಯ ಸರಕಾರ ಕಡ್ಡಾಯಗೊಳಿಸಿದೆ.

ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣ ಇಲಾಖೆಯ ಅಪರ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ.ಒಂದು ವೇಳೆ ಮುಖ್ಯಮಂತ್ರಿಯವರ ಪೂರ್ವಾನುಮತಿ ಪಡೆಯದೆ ವರ್ಗಾವಣೆ ಮಾಡಿದ್ದಲ್ಲಿ ಸರಕಾರದ ಸಂಬಂಧಪಟ್ಟ ಅಪರ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ಇಲಾಖಾ ಮುಖ್ಯಸ್ಥರನ್ನು ನೇರ ಹೊಣೆ ಮಾಡಿ ಸಂಬಂಧಿಸಿದ ಅಧಿಕಾರಿಯ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ.

2023-24ರ ಸಾಲಿನಲ್ಲಿ ಎ, ಬಿ, ಸಿ ಮತ್ತು ಡಿ ವರ್ಗದ ಅಧಿಕಾರಿ, ಸಿಬಂದಿಯಲ್ಲಿ ಆಯಾ ಜೇಷ್ಠತಾ ಘಟಕದ ಕಾರ್ಯನಿರತ ವೃಂದ ಬಲದ ಶೇ. 6ನ್ನು ಮೀರದಂತೆ ಸಾರ್ವತ್ರಿಕ ವರ್ಗಾವಣೆ ಮಾಡಲು ಜೂ. 1ರಿಂದ ಜು. 3ರ ವರೆಗೆ ಇಲಾಖಾ ಸಚಿವರಿಗೆ ಅವಕಾಶ ಕಲ್ಪಿಸಲಾಗಿತ್ತು.

ಆದರೆ ಅವಧಿ ಮುಕ್ತಾಯಗೊಂಡ ಬಳಿಕವೂ ಇಲಾಖಾ ಹಂತದಲ್ಲಿ ವರ್ಗಾವಣೆ ಕೈಗೊಂಡು ಘಟನೋತ್ತರ ಅನುಮೋದನೆಗಾಗಿ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಿದ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

Comments (0)
Add Comment