ಮೈಸೂರಿನ ಶಿಲ್ಪಿ ಕೆತ್ತಿದ ಮೂರ್ತಿ ರಾಮಮಂದಿರಕ್ಕೆ ಆಯ್ಕೆ – ಅರುಣ್ ಯೋಗಿರಾಜ್ ಕೈಯಲ್ಲಿ ಅರಳಿದ ರಾಮಲಲ್ಲಾ

ಮೈಸೂರು : ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಜನವರಿ 22 ರ ಐತಿಹಾಸಿಕ ದಿನಕ್ಕೆ ಎಲ್ಲರೂ ಕಾತುರರಿಂದ ಕಾಯುತ್ತಿದ್ದಾರೆ. ಶ್ರೀ ರಾಮನ ಭಕ್ತರಲ್ಲಿ ಸಂಭ್ರಮ ಇಮ್ಮಡಿಯಾಗಿದ್ದು , ಮೈಸೂರಿನ ಹೆಮ್ಮೆಯ ಶಿಲ್ಪಿ ಅರುಣ್ ಯೋಗಿರಾಜ್ ಕೈಯಲ್ಲಿ ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಮೂಡಿ ಬಂದಿದೆ. ದೇಶದ ಮೂವರು ಪ್ರಖ್ಯಾತ ಶಿಲ್ಪಿಗಳಿಗೆ ಕಾಯಕ ದಕ್ಕಿದ್ದು, ಜನವರಿ 22ರಂದು ರಾಮ್ ಲಲ್ಲಾ ಮೂರ್ತಿ ಲೋಕಾರ್ಪಣೆಯಾಗಲಿದೆ.

ಬೆಂಗಳೂರಿನ ಜಿ.ಎಲ್.ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಕೂಡ ಪ್ರತ್ಯೇಕ ಮೂರ್ತಿ ಕೆತ್ತನೆ ಮಾಡಿದ್ದಾರೆ. ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕು ಕೃಷ್ಣಶಿಲೆಯಲ್ಲಿ ಮೂರ್ತಿ ನಿರ್ಮಾಣ ಕಾರ್ಯ ಮಾಡಲಾಗಿದ್ದು, ಪ್ರತಿಮೆಯನ್ನು ಪೂರ್ಣಗೊಳಿಸಲು ಆರು ತಿಂಗಳು ತೆಗೆದುಕೊಂಡಿದ್ದಾರೆ. ರಾಮಲಲ್ಲಾ ಮೂರ್ತಿ ಅಡಿಯಿಂದ ಹಣೆಯವರೆಗೆ 51 ಇಂಚು ಎತ್ತರವಿದ್ದು, ಪ್ರತಿಮೆಯು “ಪ್ರಭಾವಳಿ” ಸೇರಿದಂತೆ ಎಂಟು ಅಡಿ ಎತ್ತರ ಮೂರೂವರೆ ಅಡಿ ಅಗಲ ಹೊಂದಿದೆ. ಬಾಲರಾಮನ ಸೃಷ್ಟಿ ಮಾಡಿಕೊಳ್ಳುವುದೇ ದೊಡ್ಡ ಚಾಲೆಂಜ್ ಆಗಿತ್ತು ಎಂದು ‘ಅಯೋಧ್ಯೆ ರಾಮ’ ಮೂರ್ತಿಯ ಶಿಲ್ಪಿ ಅರುಣ್ ಯೋಗಿರಾಜ್ ಹೇಳಿದ್ದಾರೆ. ಶ್ರೀರಾಮನ ಬಾಲಕ ಸ್ವರೂಪವನ್ನು ನಾವು ನೋಡಿರಲಿಲ್ಲ. ಆದರೆ, ಅದನ್ನ ಜನರ ಮನಸ್ಸಿಗೆ ಮುಟ್ಟುವಂತೆ ಮೂರ್ತಿ ಸೃಷ್ಟಿಸಬೇಕಿತ್ತು. ಮೊದಲ 20 ದಿನ ನನ್ನ ಮನಸ್ಸು ತುಂಬಾ ಖಾಲಿ ಆಗಿತ್ತು. ನಂತರ ಮಕ್ಕಳ ಬಗ್ಗೆ ಹೆಚ್ಚು ಅಧ್ಯಯನ ಮಾಡಿ ಕೆಲಸ ಆರಂಭಿಸಿದೆ. ಬಾಲಕನ ದೇಹ ಸ್ವರೂಪ, ಶ್ರೀರಾಮನ ಮುಖ ಗೋಚರಿಸುವಂತೆ ಮೂರ್ತಿಯನ್ನು ಕೆತ್ತಿದ್ದೇನೆ’’ ಎಂದು ಅವರು ಹೇಳಿದ್ದಾರೆ. ಉತ್ತರ ಭಾರತಕ್ಕೆ ಹೋಗಿ ದಕ್ಷಿಣದವರು ಅವಕಾಶ ಪಡೆಯೋದು ತುಂಬಾ ಕಷ್ಟ. ಆದ್ರೆ, ಈ ಹಿಂದೆ ನಾನು ಕೆತ್ತನೆ ಮಾಡಿದ್ದ ಶಂಕರಾಚಾರ್ಯರರ ಪ್ರತಿಮೆ, ಸುಭಾಷ್ ಚಂದ್ರ ಬೋಸ್ ಪ್ರತಿಮೆಗಳು ಈ ಅವಕಾಶದಲ್ಲಿ ಪ್ರಮುಖ ಪಾತ್ರ ವಹಿಸಿವೆ. ಅವುಗಳಲ್ಲಿ ನನ್ನ ಕೆಲಸ ನೋಡಿ, ಅಯೋಧ್ಯೆ ರಾಮಮಂದಿರಕ್ಕೆ ಶ್ರೀರಾಮನ ಮೂರ್ತಿ ಕೆತ್ತುವ ಅವಕಾಶ ಸಿಕ್ಕಿದ್ದು ಬಹಳ ಸಂತೋಷ ತಂದಿದೆ ಎಂದು ಅರುಣ್ ಯೋಗಿರಾಜ್ ಸಂತಸ ವ್ಯಕ್ತಪಡಿಸಿದ್ದಾರೆ.

Comments (0)
Add Comment