ಯತ್ನಾಳ್ ಅವರ ಕೆಲವು ಮಾತಿನಿಂದ ಪಕ್ಷಕ್ಕೆ ಮುಜುಗರ ಆಗುತ್ತಿದೆ -ಸದಾನಂದ ಗೌಡ

ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಕರ್ನಾಟಕದಲ್ಲಿ ಬಿಜೆಪಿ ಸಿದ್ಧತೆ ಆರಂಭಿಸಿದೆ. ಇದಕ್ಕೆ ಪೂರಕವೆಂಬಂತೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಪದಾಧಿಕಾರಿಗಳ ಸಭೆ ನಡೆಸಿ ಪಕ್ಷ ಸಂಘಟನೆ ಬಗ್ಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದರು. ಹಾಗೂ ಈ ಸಭೆಯಲ್ಲಿ ಯತ್ನಾಳ್ ಬಗೆಗಿನ ಹೇಳಿಕೆಗಳು ಪ್ರಸ್ತಾವ ವಾಗಿದ್ದು ಈ ಬಗ್ಗೆ ಹೈಕಮಾಂಡ್‌ಗೆ ದೂರು ಕೊಡಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ.

ಯಡಿಯೂರಪ್ಪ ಕಾಲದಲ್ಲಿ ಕೋವಿಡ್ ಅಕ್ರಮ ನಡೆದಿದೆ ಎಂದ ಶಾಸಕ ಯತ್ನಾಳ್ ಹೇಳಿಕೆಗೆ ಸಂಬಂಧಿಸಿದಂತೆ ಯತ್ನಾಳ್ ವಿಚಾರ ಪ್ರಸ್ತಾಪ ಮಾಡಿದ ಸಂಸದ ಡಿವಿ ಸದಾನಂದ ಗೌಡ, ವರಿಷ್ಠರು ಯತ್ನಾಳ್ ಅವರನ್ನು ಕರೆದು ಮಾತನಾಡಬೇಕು. ಇವರ ಈ ಕೆಲವು ಮಾತಿನಿಂದ ಪಕ್ಷಕ್ಕೆ ಮುಜುಗರ ಆಗುತ್ತಿದೆ. ಪದೇಪದೇ ಮಾತನಾಡುವುದು ಇತ್ಯರ್ಥ ಆಗಬೇಕು ಎಂದು ಒತ್ತಾಯಿಸಿದರು.

ಯತ್ನಾಳ್ ರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಇಲ್ಲವೇ ಬಹಿರಂಗ ಹೇಳಿಕೆಗೆ ಫುಲ್ ಸ್ಟಾಪ್ ಹಾಕಿಸಬೇಕು. ವರಿಷ್ಠರ ಗಮನಕ್ಕೆ ಇದನ್ನು ತಂದು ವರಿಷ್ಠರೇ ಕರೆದು ಮಾತನಾಡುವಂತೆ ಮಾಡಬೇಕು ಎಂದು ಸಭೆಯಲ್ಲಿ ಹೇಳಿದರು. ಇದಕ್ಕೆ ಇನ್ನಷ್ಟು ನಾಯಕರು ಧ್ವನಿಗೂಡಿಸಿದರು.

ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಿರುವ ಬಿಜೆಪಿಗೆ ಸ್ವಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರೋಧ ಪಕ್ಷವಾಗಿ ಕಾಡುತ್ತಿದ್ದು, ನಾಯಕರಿಗೆ ದೊಡ್ಡ ತಲೆನೋವಾಗಿದೆ. ಹೀಗಾಗಿ ಇದೀಗ ಎಲ್ಲಾ ನಾಯಕರು ಹೈಕಮಾಂಡ್​ ಗಮನಕ್ಕೆ ತರುವ ಬಗ್ಗೆ ಚರ್ಚಿಸಿದೆ.

Comments (0)
Add Comment