ಯತ್ನಾಳ್ ಬಾಯಿಬಲದ ಹಿಂದಿನ ಶಕ್ತಿ ಯಾವುದು – ಸಿಎಂ ವ್ಯಂಗ್ಯ

ಬೆಂಗಳೂರು: ಬಹಿರಂಗವಾಗಿ ತಮ್ಮ ಪಕ್ಷದ ಉನ್ನತ ನಾಯಕರ ವಿರುದ್ಧವೇ ಆರೋಪ ಮಾಡುತ್ತಿರುವ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಬಾಯಿಬಲದ ಹಿಂದೆ ಇರುವ ಶಕ್ತಿ ಯಾವುದು? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಶಾಸಕ ಯತ್ನಾಳ್ ಈ ರೀತಿಯ ಆರೋಪಗಳನ್ನು ಮಾಡುವುದು ಇದೇ ಮೊದಲ ಬಾರಿಯೇನಲ್ಲ. ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಅವರ ಮಕ್ಕಳ ವಿರುದ್ಧ ಪುಂಖಾನುಪುಂಖವಾಗಿ ಆರೋಪಿಸಿದ್ದಾರೆ. ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಬೇಕಾದರೆ ಪಕ್ಷದ ಹೈಕಮಾಂಡಿಗೆ 2,000 ಕೋಟಿ ರೂ. ನೀಡಬೇಕಾಗುತ್ತದೆ ಎಂಬ ಗಂಭೀರ ಆರೋಪವನ್ನೂ ಸಹ ಅವರು ಮಾಡಿದ್ದಾರೆ. ಬಿಜೆಪಿಯಲ್ಲಿರುವ ಯಾವ ‘ಜೀ’ ಗಳ ಬಲದಿಂದ ಇಂತಹ ಸ್ವಪಕ್ಷೀಯರ ವಿರುದ್ಧ ಇಂತಹ ಮಾನಹಾನಿಕರ ಆರೋಪ ಮಾಡಿಯೂ ಅವರೂ ಬಚಾವಾಗುತ್ತಿದ್ದಾರೆ ಎಂಬುವುದು ಕೂಡಾ ಬಯಲಾಗಬೇಕಾಗಿದೆ ಎಂದು ಹೇಳಿದ್ದಾರೆ.

ಮೌಲ್ವಿ ತನ್ವೀರ್ ಹಾಶ್ಮಿ ಅವರೊಂದಿಗಿನ ನನ್ನ ಪೋಟೊವನ್ನು ಹಿಡಿದುಕೊಂಡು ಬಿಜೆಪಿ ಶಾಸಕ ಯತ್ನಾಳ್ ಅವರು ನನ್ನ ವಿರುದ್ಧ ಆರೋಪ ಮಾಡಿದರೂ ಅವರ ನಿಜವಾದ ಗುರಿ ಪ್ರಧಾನಿ ನರೇಂದ್ರ ಮೋದಿ ಅವರು ಎನ್ನುವುದು ನಿಧಾನವಾಗಿ ಬಯಲಾಗತೊಡಗಿದೆ. ಮೌಲ್ವಿ ಹಾಶ್ಮಿ ಅವರ ಜೊತೆಗೆ ಇತರ ಬಿಜೆಪಿ ನಾಯಕರು ಮಾತ್ರವಲ್ಲ ಸಾಕ್ಷಾತ್ ನರೇಂದ್ರ ಮೋದಿ ಅವರೂ ಸಂಬಂಧ ಹೊಂದಿರುವುದು ಮಾಧ್ಯಮಗಳಲ್ಲಿ ಬಿಡುಗಡೆಯಾಗಿರುವ ಪೋಟೊಗಳು ಸ್ಪಷ್ಟವಾಗಿ ಹೇಳುತ್ತಿವೆ. ದೀರ್ಘಕಾಲದಿಂದ ಹಾಶ್ಮಿ ಅವರಿಗೆ ಅತ್ಯಂತ ಆತ್ಮೀಯರಾಗಿರುವ ಹಾಗೂ ಊರಿನಲ್ಲಿ ತನ್ನ ನೆರೆಹೊರೆಯಾಗಿರುವ ಯತ್ನಾಳ್ ಅವರಿಗೆ ಇದು ತಿಳಿದಿರಲಿಲ್ಲ ಎನ್ನುವುದನ್ನು ನಂಬಲು ಸಾಧ್ಯವೇ? ಎಂದು ವ್ಯಂಗ್ಯ ಮಾಡಿದ್ದಾರೆ.

ಇನ್ನು ರಾಜ್ಯ ಬಿಜೆಪಿ ಅಧ್ಯಕ್ಷತೆ ಮತ್ತು ವಿರೋಧ ಪಕ್ಷದ ನಾಯಕನ ಸ್ಥಾನ ತಪ್ಪಿಹೋದ ಪರಿಣಾಮ ಬಿಜೆಪಿ ಶಾಸಕ ಯತ್ನಾಳ್ ಅವರು ಕೆರಳಿ ಕೆಂಡವಾಗಿರುತ್ತಾರೆ. ಇದಕ್ಕೆ ಕಾರಣಕರ್ತರಾದ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದಲೇ ಮೌಲ್ವಿ ತನ್ವೀರ್ ಹಾಶ್ಮಿ ಜೊತೆಗಿನ ನನ್ನ ಪೋಟೋವನ್ನು ತೋರಿಸಿ ಆರೋಪಿಸಿದ್ದಾರೆ. ಈ ಆರೋಪದ ಬಳಿಕ ಮೌಲ್ವಿ ಅವರ ಜೊತೆಗಿನ ಪ್ರಧಾನಿ ಮೋದಿ ಅವರ ಸಂಬಂಧದ ವಿವರವೂ ಹೊರಬರಲಿದೆ ಎನ್ನುವುದು ಅವರಿಗೆ ಖಂಡಿತ ತಿಳಿದಿತ್ತು. ಅವೆಲ್ಲವೂ ಬಯಲಾಗಿ ಪ್ರಧಾನಿ ಮತ್ತು ಬಿಜೆಪಿ ನಾಯಕರು ಮುಜುಗರಕ್ಕೀಡಾಗಲಿ ಎಂಬ ದುರುದ್ದೇಶದಿಂದ ನನ್ನ ವಿರುದ್ಧ ಆರೋಪ ಮಾಡುವ ಆಟವಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ.

Comments (0)
Add Comment