ಯುಗಾದಿಗೆ ಸ್ಪೆಷಲ್‌ ರವೆ ಹೋಳಿಗೆ ಮಾಡುವ ವಿಧಾನ

ರವೆ ಹೋಳಿಗೆ ಮದುವೆಗಳು, ಹಬ್ಬಗಳು, ಅಥವಾ ಮಹತ್ವದ ಪೂಜೆಯ ಸಮಯದಲ್ಲಿ ಕೆಲವು ವಿಶೇಷ ಸಂದರ್ಭಗಳಲ್ಲಿ ತಯಾರಿಸಲಾದ ಸಿಹಿ ಭಕ್ಷ್ಯವಾಗಿದೆ.  ಹೀಗಾಗಿ ರುಚಿ ರುಚಿಯಾದ ಹಾಗೂ ಸಿಂಪಲ್ಲಾಗಿ ರವೆ ಹೋಳಿಗೆ ಮಾಡೋ ವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:

ಚಿರೋಟಿ ರವೆ – 1/4 ಕಪ್, ಸಣ್ಣ ರವೆ/ಮೀಡಿಯಂ ರವೆ – 1.5 ಕಪ್, ಗೋಧಿ ಹಿಟ್ಟು – 1 ಕಪ್, ಬೆಲ್ಲ – 1 ಕಪ್, ಏಲಕ್ಕಿ ಪುಡಿ – ಚಿಟಿಕೆ, ಅರಿಶಿನ – ಚಿಟಿಕೆ, ಕೊಬ್ಬರಿ ತುರಿ – 1/2 ಕಪ್, ನೀರು -2.5 ಕಪ್, ಉಪ್ಪು – ರುಚಿಗೆ ತಕ್ಕಷ್ಟು, ಕೇಸರಿ ಬಣ್ಣ – 1/4 ಟೀಸ್ಪೂನ್. (ನಿಮಗೆ ಬೇಕಾದರೆ ಮಾತ್ರ).

ಮಾಡುವ ವಿಧಾನ:

ಒಂದು ಅಗಲವಾದ ಪಾತ್ರೆಗೆ ಗೋಧಿಹಿಟ್ಟು, ಚಿರೋಟಿ ರವೆ, ಅರಿಶಿನ, ಉಪ್ಪು ಹಾಕಿ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಹಿಟ್ಟನ್ನು ಕಲಸುತ್ತಾ ಬನ್ನಿ. ಹಿಟ್ಟು ಮೃದುವಾಗಿರಬೇಕು. ಕಲಸಿದ ಹಿಟ್ಟಿಗೆ ಸ್ವಲ್ಪ ಎಣ್ಣೆ ಸೇರಿಸಿ ಮೃದುವಾಗಿರುವಂತೆ ಕಲಸಿ ಒಂದು ಪಾತ್ರೆಗೆ ಹಾಕಿ 1 ಗಂಟೆ ಸಮಯ ತಟ್ಟೆ ಮುಚ್ಚಿ ಇಡಿ. ಒಲೆ ಮೇಲೆ ಒಂದು ಪಾತ್ರೆಗೆ ಬೆಲ್ಲ, ನೀರು ಹಾಕಿ ಕುದಿಸಿ, ಬೆಲ್ಲ ಕರಗಿ ನೀರು ಕುದಿಯುವಾಗ ಅದಕ್ಕೆ ರವೆಯನ್ನು, ಏಲಕ್ಕಿ ಪುಡಿ ಹಾಕಿ ಕಲಸಿ. ಈ ಮಿಶ್ರಣ ಜಾಸ್ತಿ ಗಟ್ಟಿ ಆಗಬಾರದು. ಸ್ವಲ್ಪ ತೆಳ್ಳಗೆ ಇದ್ದರೆ ಒಳ್ಳೆಯದು. ಮೇಲೆ ಹೇಳಿದ ಬೆಲ್ಲ, ರವೆ, ಏಲಕ್ಕಿ ಮಿಶ್ರಣಕ್ಕೆ ಕೊಬ್ಬರಿ ತುರಿ ಸೇರಿಸಿ ಸಣ್ಣ ಸಣ್ಣ ಉಂಡೆಯನ್ನಾಗಿ ಮಾಡಿಟ್ಟುಕೊಳ್ಳಿ. ಕೈಗೆ ಎಣ್ಣೆ ಸವರಿಕೊಂಡು ನಿಂಬೆಹಣ್ಣಿನ ಗಾತ್ರದಲ್ಲಿ ಕಲಸಿದ ಹಿಟ್ಟನ್ನು(1 ಗಂಟೆ ಸಮಯ ತಟ್ಟೆ ಮುಚ್ಚಿ ಇಟ್ಟ)ತೆಗೆದುಕೊಂಡು ಕೈಯಲ್ಲಿ ಸ್ವಲ್ಪ ಅಗಲ ಮಾಡಿ ಬೆಲ್ಲ, ರವೆ, ಏಲಕ್ಕಿ ಮಿಶ್ರಣಕ್ಕೆ ಕೊಬ್ಬರಿ ತುರಿ ಸೇರಿಸಿ ಮಾಡಿದ ಸಣ್ಣ ಉಂಡೆ ಅದರೊಳಗೆ ಇಟ್ಟು ಲಟ್ಟಿಸಿ. ತವಾ ಬಿಸಿಯಾದ ಮೇಲೆ ಹಾಕಿ ಎರಡು ಕಡೆಗೂ ತುಪ್ಪ ಸವರಿ ಬೇಯಿಸಿದರೆ ರವೆ ಹೋಳಿಗೆ ಸವಿಯಲು ಸಿದ್ಧ.

Comments (0)
Add Comment