ರಷ್ಯಾಗೆ ಭೇಟಿ ನೀಡುವಂತೆ ಪ್ರಧಾನಿ ಮೋದಿಗೆ ಆಹ್ವಾನಿಸಿದ ಪುಟಿನ್

ರಷ್ಯಾ: ಮುಂದಿನ ವರ್ಷ ರಷ್ಯಾಗೆ ಭೇಟಿ ನೀಡುವಂತೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ. ಇದು ಜಾಗತಿಕ ಬೆಳವಣಿಗೆಗಳು ಹಾಗೂ ದ್ವಿಪಕ್ಷೀ ಯ ಸಂಬಂಧದ ಕುರಿತು ಚರ್ಚಿಸಲು ಅವಕಾಶ ನೀಡುತ್ತದೆ ಎಂದು ಹೇಳಿದ್ದಾರೆ.

“ನಮ್ಮ ಸ್ನೇಹಿತ ಪ್ರಧಾನಿ ಮೋದಿಯನ್ನು ರಷ್ಯಾದಲ್ಲಿ ನೋಡಲು ನಾವು ಸಂತೋಷಪಡುತ್ತೇವೆ” ಎಂದು ರಷ್ಯಾ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್. ಜೈ ಶಂಕರ್ ಅವರೊಂದಿಗೆ ರಷ್ಯಾ ಅಧ್ಯಕ್ಷರು ಹೇಳಿದ್ದಾರೆ

ಪ್ರಧಾನಿ ಮೋದಿ ರಷ್ಯಾಗೆ ಭೇಟಿ ನೀಡಿದರೆ, ನಾವು ಎಲ್ಲಾ ಪ್ರಸ್ತುತ ಸಮಸ್ಯೆಗಳನ್ನು ಚರ್ಚಿಸಲು ಸಾಧ್ಯವಾಗುತ್ತದೆ. ರಷ್ಯಾ-ಭಾರತದ ಸಂಬಂಧಗಳ ವೃದ್ಧಿಯ ಬಗ್ಗೆ ಮಾತನಾಡಲು ಸಾಧ್ಯವಾಗುತ್ತದೆ. ನಾವು ಮಾತನಾಡಲು ಬಹಳ ದೊಡ್ಡ ಪ್ರಮಾಣದ ವಿಚಾರಗಳಿವೆ” ಎಂದು ರಷ್ಯಾ ಅಧ್ಯಕ್ಷರು ಹೇಳಿದ್ದಾರೆ. ಮೋದಿಯವರಿಗೆ ಶುಭ ಹಾರೈಕೆಗಳು ಮತ್ತು ರಷ್ಯಾಗೆ ಬರುವ ಆಹ್ವಾನವನ್ನು ಅವರಿಗೆ ರವಾನಿಸುವಂತೆ ಸಚಿವ ಎಸ್ ಜೈಶಂಕರ್ ಅವರಿಗೆ ಪುಟಿನ್ ಕೇಳಿಕೊಂಡಿದ್ದಾರೆ.

ಐದು ದಿನಗಳ ಅಧಿಕೃತ ಭೇಟಿಗಾಗಿ ರಷ್ಯಾಗೆ ಬಂದಿರುವ ಜೈಶಂಕರ್ ಅವರು, ಇದಕ್ಕೂ ಮುನ್ನ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರನ್ನು ಭೇಟಿ ಮಾಡಿದ್ದರು.

Comments (0)
Add Comment