ರಷ್ಯಾ ಅಧ್ಯಕ್ಷ ಪುಟಿನ್​ಗೆ ಹೃದಯಸ್ತಂಭನ- ಆಸ್ಪತ್ರೆಯಲ್ಲಿ ಚಿಕಿತ್ಸೆ

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಹೃದಯ ಸ್ತಂಭನವಾಗಿರುವ ಸುದ್ದಿ ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ ಭಾನುವಾರ ಅ. 22 ರಂದು ಸಂಜೆ ಪುಟಿನ್‌ಗೆ ಕಾರ್ಡಿಯಾಕ್ ಅರೆಸ್ಟ್ ಆಗಿದೆ ಎನ್ನಲಾಗಿದೆ. ಸದ್ಯ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಧ್ಯಮ ವರದಿ ಮಾಡಿದೆ.

ಈ ಕುರಿತು ‘ಜನರಲ್ ಎಸ್​ವಿಆರ್’ ಎನ್ನುವ ಅಲ್ಲಿನ ಟೆಲಿಗ್ರಾಂ ಚಾನಲ್​ನಲ್ಲಿ ಸುದ್ದಿ ಬಂದಿದೆ. ವರದಿ ಪ್ರಕಾರ, ಅಕ್ಟೋಬರ್ 22ರಂದು ರಾತ್ರಿ 9ಗಂಟೆಗೆ ವ್ಲಾದಿಮಿರ್ ಪುಟಿನ್ ಅವರು ತಮ್ಮ ಬೆಡ್​ರೂಮ್​ನಲ್ಲಿ ಮಲಗಿದ ಸ್ಥಿತಿಯಲ್ಲಿ ಸೆಕ್ಯೂರಿಟಿ ಅಧಿಕಾರಿಗಳಿಗೆ ಕಂಡಿದ್ದರು. ಆಹಾರ ಮತ್ತು ಡ್ರಿಂಕ್ಸ್ ಇದ್ದ ಟೇಬಲ್ ಕೆಳಗೆ ಬಿದ್ದಿತ್ತು ಎನ್ನಲಾಗುತ್ತಿದೆ.

ಪುಟಿನ್‌ ಕೆಳಗೆ ಬಿದ್ದಾಗ ಟೇಬಲ್​ಗೆ ತಾಗಿ ಅದು ಬಿದ್ದು ಶಬ್ದ ಬಂದ ಹಿನ್ನಲೆ ನೋಡಿದಾಗ ಪುಟಿನ್ ಅವರು ನೆಲದಲ್ಲಿ ಬಿದ್ದು ಒದ್ದಾಡಿದ್ದಾರೆ. ಅಲ್ಲೇ ಪಕ್ಕದ ರೂಮುಗಳಲ್ಲಿದ್ದ ಕರ್ತವ್ಯನಿರತ ವೈದ್ಯರನ್ನು ಕೂಡಲೇ ಕರೆಸಲಾಗಿದೆ ಎಂದು ಟೆಲಿಗ್ರಾಂ ಚಾನಲ್​ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವ್ಲಾದಿಮಿರ್ ಪುಟಿನ್ ಅವರನ್ನು ಅಲ್ಲೇ ವಿಶೇಷ ಕೋಣೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಐಸಿಯುಗೆ ದಾಖಲಿಸಲಾಯಿತು. ಸರಿಯಾದ ಸಮಯದಲ್ಲಿ ಚಿಕಿತ್ಸೆ ನೋಡಿದ ಕಾರಣ ರಷ್ಯಾ ಅಧ್ಯಕ್ಷರು ಚೇತರಿಸಿಕೊಂಡಿದ್ದಾರೆ ಎಂದು ಜನರಲ್ ಎಸ್​ವಿಆರ್ ಹೆಸರಿನ ಟೆಲಿಗ್ರಾಂ ಚಾನಲ್​ನಲ್ಲಿ ತಿಳಿಸಲಾಗಿದೆ.

Comments (0)
Add Comment