ರಸ್ತೆಗಿಳಿಯಲು ಸಜ್ಜಾದ 100 ಅಶ್ವಮೇಧ ಕ್ಲಾಸಿಕ್ ಬಸ್ – ನಾಳೆ ಚಾಲನೆ

ಬೆಂಗಳೂರು: ಕರ್ನಾಟಕ ಸಾರಿಗೆ ಇಲಾಖೆ ಹೊಸ 100 ಕ್ಲಾಸಿಕ್ ಬಸ್ ಗಳನ್ನು ರಸ್ತೆಗಿಳಿಸುತ್ತಿದೆ. ಈ ಬಸ್ಸುಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನಾಳೆ ಬೆಳಗ್ಗೆ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಮೇಲೆ ಚಾಲನೆ ನೀಡಲಿದ್ದಾರೆ.

ಕೆಎಸ್​ಆರ್ ​ಟಿಸಿಗೆ ಒಟ್ಟು 1,000 ಹೊಸ ಬಸ್ ಗಳು ಬರಲಿದ್ದು, ಮೊದಲ ಹಂತದಲ್ಲಿ 100 ಕ್ಲಾಸಿಕ್ ಬಸ್ ಗಳು ರಸ್ತೆಗಿಳಿಯಲಿವೆ. ಈ ನೂರು ಬಸ್ ಗಳಿಗೆ ಅಶ್ವಮೇಧ ಕ್ಲಾಸಿಕ್ ಎಂದು ಹೆಸರಿಡಲಾಗಿದೆ. ಈ ಬಸ್ಸುಗಳಲ್ಲಿ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

ಅಶ್ವಮೇಧ ಕ್ಲಾಸಿಕ್ ಬಸ್ ಗಳು 3.42 ಮೀಟರ್ ಎತ್ತರವಿದ್ದು, 12 ಪ್ಯಾನಿಕ್ ಬಟನ್, ಜಿಪಿಎಸ್, ಎರಡು ರೇರ್ ಕ್ಯಾಮರಾ ಹಾಗೂ ಆರು ಮೊಬೈಲ್ ಫೋನ್ ಚಾರ್ಜಿಂಗ್ ಪಾಯಿಂಟ್ ಗಳನ್ನು ಒಳಗೊಂಡಿದೆ. ಅಷ್ಟೇ ಅಲ್ಲದೆ, 52 ಬಕೆಟ್ ಸೀಟು, ಬಸ್ಸು ಒಳಗೆ ಮತ್ತು ಹೊರ ಭಾಗದಲ್ಲಿ ಎಲ್ ಇಡಿ ಮಾರ್ಗಫಲಕ, ಪ್ರಯಾಣಿಕರು ಲಗೇಜ್ ಇಡಲು ದೊಡ್ಡದಾದ ಸ್ಥಳಾವಕಾಶ ನೀಡಲಾಗಿದೆ.

ಇನ್ನು ಈ ಬಸ್ ಗಳು ರಾಜ್ಯದ ಪ್ರತಿ ಜಿಲ್ಲಾ ಕೇಂದ್ರದಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುತ್ತದೆ. ರಾಜ್ಯ ಸರ್ಕಾರದ ಐದು ಗ್ಯಾರೆಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಈ ಬಸ್ ಗಳಲ್ಲಿ ಲಭ್ಯವಿದೆ. ಮಹಿಳೆಯರು ಶಕ್ತಿ ಯೋಜನೆ ಅಡಿಯಲ್ಲಿ ಈ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಪುರುಷರು ಹಣ ನೀಡಿ ಪ್ರಯಾಣಿಸಬಹುದಾಗಿದೆ.

Comments (0)
Add Comment