ರಾಜ್ಯದಲ್ಲಿ ಆಹಾರ ಉತ್ಪಾದನೆ ಶೇ. 40ರಷ್ಟು ಕುಸಿತ : ತೀವ್ರ ಅಭಾವ, ಬೆಲೆ ಹೆಚ್ಚಳ ಸಾಧ್ಯತೆ..!

ಬೆಂಗಳೂರು : ರಾಜ್ಯದಲ್ಲಿ ಆಹಾರ ಧಾನ್ಯಗಳಿಗೆ ತೀವ್ರ ಅಭಾವ ಸೃಷ್ಟಿಯಾಗುವ ಸಾಧ್ಯತೆ ಇದೆ. ಬರಗಾಲದ ಪರಿಣಾಮ ಒಟ್ಟಾರೆ ಆಹಾರ ಧಾನ್ಯಗಳ ಉತ್ಪಾದನೆ ಶೇಕಡ 40ಕ್ಕೂ ಅಧಿಕ ಪ್ರಮಾಣದಲ್ಲಿ ಕುಸಿಯುವ ಸಾಧ್ಯತೆಯಿದ್ದು, ರಾಗಿ, ಮೆಕ್ಕೆಜೋಳ, ಶೇಂಗಾ, ತೊಗರಿ ಎಲ್ಲವೂ ಕುಂಠಿತವಾಗಲಿದೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಕೆಲವು ಕಡೆ ರೈತರು ಎರಡು ಬಾರಿ ಬಿತ್ತನೆ ಮಾಡಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಫಸಲು ಬಂದಿಲ್ಲ. ರಾಜ್ಯದಲ್ಲಿ 114.27 ಲಕ್ಷ ಹೆಕ್ಟರ್ ವಿಸ್ತೀರ್ಣದಲ್ಲಿ ಕೃಷಿ ಬೆಳೆ ಬಿತ್ತನೆ, 148.16 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಗುರಿ ಹೊಂದಲಾಗಿತ್ತು. ಆದರೆ, ಮುಂಗಾರಿನಲ್ಲಿ 92.87 ಲಕ್ಷ ಮೆಟ್ರಿಕ್ ಟನ್, ಹಿಂಗಾರಿನಲ್ಲಿ 19.45 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ನಿರೀಕ್ಷಿಸಲಾಗಿದ್ದು, ಒಟ್ಟಾರೆ 112.33 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಉತ್ಪಾದನೆಯಾಗಲಿದೆ ಎಂದು ಅಂದಾಜಿಸಲಾಗಿದೆ. 36 ಲಕ್ಷ ಮೆಟ್ರಿಕ್ ಟನ್ ಗೂ ಅಧಿಕ ಆಹಾರ ಧಾನ್ಯಗಳ ಕೊರತೆಯಾಗಲಿದ್ದು, ಹಿಂಗಾರು, ಮುಂಗಾರಿನ ಕೊರತೆಯಿಂದ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ಬರಗಾಲದ ಪರಿಣಾಮ ಜಲಾಶಯಗಳಲ್ಲಿ ನೀರಿಲ್ಲ. ಜಲಾಶಯಗಳಿಂದ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಹರಿಸದ ಪರಿಣಾಮ ರೈತರು ಭತ್ತ ಬೆಳೆದಿಲ್ಲ. ಹೀಗಾಗಿ, ಅಕ್ಕಿ ಉತ್ಪಾದನೆ ಕುಸಿಯುವ ಸಾಧ್ಯತೆ ಇದೆ. ಮಾತ್ರವಲ್ಲದೆ, ರಾಗಿ, ಮೆಕ್ಕೆಜೋಳ, ಶೇಂಗಾ, ತೊಗರಿ ಕೂಡ ಉತ್ಪಾದನೆ ಕುಸಿತವಾಗಿ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Comments (0)
Add Comment