ರಾಜ್ಯದ ಬರಪೀಡಿತ ತಾಲೂಕಿನ 1ರಿಂದ 10ನೇ ತರಗತಿ ಶಾಲಾ ಮಕ್ಕಳಿಗೆ ‘ಬೇಸಿಗೆ ರಜೆ’ಯಲ್ಲೂ ‘ಬಿಸಿಯೂಟ’ ಲಭ್ಯ

ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಘೋಷಿಸಿರುವ 31 ಕಂದಾಯ ಜಿಲ್ಲೆಗಳ 223 ಬರ ಪೀಡಿತ ತಾಲ್ಲೂಕುಗಳಲ್ಲಿ ಮಧ್ಯಾಹ್ನ ಉಪಾಹಾರ ಯೋಜನೆ ಕಾರ್ಯಕ್ರಮವನ್ನು ಸರ್ಕಾರಿ ಮತ್ತು ಅನುದಾನಿತ 1 ರಿಂದ 10ನೇ ತರಗತಿಗಳ ಶಾಲಾ ಮಕ್ಕಳಿಗೆ ಬೇಸಿಗೆ ರಜಾ ಅವಧಿಯಲ್ಲಿ ಅನುಷ್ಠಾನಗೊಳಿಸುವಂತೆ ಮಾರ್ಗಸೂಚಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ.

ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದ್ದು, 2023-24ನೇ ಸಾಲಿನ ರಾಜ್ಯ ಸರ್ಕಾರದ ನಡವಳಿಯಂತೆ ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಬರ ಪೀಡಿತ 31 ಕಂದಾಯ ಜಿಲ್ಲೆಗಳಲ್ಲಿ ಒಟ್ಟು 236ರ ಪೈಕಿ 223 ಬರಪೀಡಿತ ತಾಲ್ಲೂಕುಗಳು ಎಂದು ಸರ್ಕಾರ ಆದೇಶಿಸಿದೆ. ಸರ್ವೋಚ್ಛ ನ್ಯಾಯಾಲಯದ ಆದೇಶದ ಅನುಸಾರವಾಗಿ ಬರಗಾಲ ಪೀಡಿತ ಪ್ರದೇಶದಲ್ಲಿ ಬೇಸಿಗೆ ರಜೆಯಲ್ಲೂ ಸಹ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ನೀಡಬೇಕಾಗಿದೆ ಎಂದಿದೆ.

ಪ್ರಸ್ತುತ 2024-25ನೇ ಸಾಲಿನ ಬೇಸಿಗೆ ರಜೆಯ ಅವಧಿಯು ದಿನಾಂಕ 11-04-2024ರಿಂದ ದಿನಾಂಕ 28-05-2024ರವರೆಗೆ ಒಟ್ಟು 41 ದಿನಗಳ ಅವಧಿಯಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಕಾರ್ಯಕ್ರಮ ಇದೆ. ಈ ಹಿನ್ನಲೆಯಲ್ಲಿ ಪಿಎಂ ಪೋಷಣ್ ಮಧ್ಯಾಹ್ನ ಉಪಾಹಾರ ಯೋಜನೆಯನ್ನು 1 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಅನುಷ್ಠಾನಕ್ಕಾಗಿ ಸಿದ್ದಪಡಿಸಿದ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಅಯವ್ಯಯ ಬಗ್ಗೆ ಮಾರ್ಗಸೂಚಿ ಪ್ರಕಟಿಸಲಾಗಿದೆ. ಅದರಂತೆ ಬಿಸಿಯೂಟ ವಿತರಿಸುವಂತೆ ತಿಳಿಸಿದೆ.

Comments (0)
Add Comment