ರಾಮಮಂದಿರ ಉದ್ಘಾಟನೆ ದಿನ ದೇಶದ ಪ್ರತಿಯೊಬ್ಬರು ಮನೆಯಲ್ಲಿ ಜ್ಯೋತಿ ಬೆಳಗಿಸಿ- ಮೋದಿ ಕರೆ

ಅಯೋಧ್ಯೆ: ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ದಿನ ದೇಶದ ಪ್ರತಿಯೊಬ್ಬ ಭಾರತೀಯರು ತಮ್ಮ ಮನೆಯಲ್ಲಿ ದೀಪ ಬೆಳಗಿಸಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಅಯೋಧ್ಯೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಐತಿಹಾಸಿಕ ಕ್ಷಣವು ನಮ್ಮೆಲ್ಲರ ಜೀವನದಲ್ಲಿ ಅದೃಷ್ಟದಂತೆ ಬಂದಿದೆ. ನಾವು ದೇಶಕ್ಕಾಗಿ ಹೊಸ ಸಂಕಲ್ಪವನ್ನು ತೆಗೆದುಕೊಳ್ಳಬೇಕು. ನಮಗೆ ಹೊಸ ಶಕ್ತಿಯನ್ನು ತುಂಬಬೇಕು. ಇದಕ್ಕಾಗಿ ಎಲ್ಲಾ 140 ಕೋಟಿ ದೇಶವಾಸಿಗಳು ಜನವರಿ 22 ರಂದು ತಮ್ಮ ಮನೆಗಳಲ್ಲಿ ರಾಮಜ್ಯೋತಿ ಬೆಳಗಿಸುವ ಮೂಲಕ ದೀಪಾವಳಿ ಆಚರಿಸಿ ಎಂದು ತಿಳಿಸಿದ್ದಾರೆ.

ಜನವರಿ 22 ರಂದು ನಡೆಯುವ ಕಾರ್ಯಕ್ರಮದ ಭಾಗವಾಗಲು ಪ್ರತಿಯೊಬ್ಬರೂ ಅಯೋಧ್ಯೆಗೆ ಬರಲು ಬಯಸುತ್ತಾರೆ. ಆದರೆ ಎಲ್ಲರೂ ಬರಲು ಸಾಧ್ಯವಿಲ್ಲ ಎಂದು ನಿಮಗೆ ತಿಳಿದಿದೆ. ಆದ್ದರಿಂದ ಜನವರಿ 22 ರಂದು ಔಪಚಾರಿಕ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ನಂತರ, ಜನರು ತಮಗೆ ಅನುಕೂಲ ಮಾಡಿಕೊಂಡು ಅಯೋಧ್ಯೆಗೆ ಬರಬೇಕು. ಜನವರಿ 22 ರಂದೇ ಅಯೋಧ್ಯೆಗೆ ಬರಲು ಮನಸ್ಸು ಮಾಡಬೇಡಿ ಎಂದು ನಾನು ಎಲ್ಲ ರಾಮಭಕ್ತರಲ್ಲಿ ವಿನಂತಿಸುತ್ತೇನೆ ಎಂದಿದ್ದಾರೆ.

ರಾಮನ ಭವ್ಯ ಮಂದಿರ ನಿರ್ಮಾಣವಾದ ನಂತರ ಇಲ್ಲಿಗೆ ಬರುವವರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರ ಅಯೋಧ್ಯೆಯಲ್ಲಿ ಸಾವಿರಾರು ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ.

ಇಂದು ನಾನು ಅಯೋಧ್ಯಾ ಧಾಮ್ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣವನ್ನು ಉದ್ಘಾಟಿಸುವ ಸೌಭಾಗ್ಯ ನನ್ನದಾಗಿದೆ. ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಹೆಸರಿಟ್ಟಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.

Comments (0)
Add Comment