ರುಚಿಕರವಾದ ಮಟನ್ ಗೀರೋಸ್ಟ್ ಮಾಡುವ ವಿಧಾನ

ಮಟನ್ ಎಂದರೆ ಮಾಂಸಹಾರಿಗಳ ಬಾಯಲ್ಲಿ ನೀರು ಬರುತ್ತದೆ. ರುಚಿಕರವಾದ ಮಟನ್ ಗೀರೋಸ್ಟ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಮನೆಗೆ ಯಾರಾದರು ಅತಿಥಿಗಳು ಬಂದಾಗ ಸುಲಭವಾಗಿ ಇದನ್ನು ರೆಡಿ ಮಾಡಬಹುದು.

ಬೇಕಾಗುವ ಸಾಮಾಗ್ರಿಗಳು:

ಮಟನ್ -1 ಕೆಜಿ, ತುಪ್ಪ-2 ಚಮಚ, ಈರುಳ್ಳಿ-1, ಉಪ್ಪು ರುಚಿಗೆ ತಕ್ಕಷ್ಟು, 1 ಟೀ ಸ್ಪೂನ್ – ಅರಿಶಿನ, 1 ಟೇಬಲ್ ಸ್ಪೂನ್ ಶುಂಠಿ, ಬೆಳ್ಳುಳ್ಳಿ ಪೇಸ್ಟ್, 1 ಟೀ ಸ್ಪೂನ್-ಮೆಣಸಿನ ಪುಡಿ, 1 ಟೀ ಸ್ಪೂನ್-ಜೀರಿಗೆ ಪುಡಿ, 1 ಟೇಬಲ್ ಸ್ಪೂನ್-ಕೊತ್ತಂಬರಿ ಬೀಜ, ½ ಟೀ ಸ್ಪೂನ್-ಸಾಸಿವೆ, ½ ಟೀ ಸ್ಪೂನ್-ಮೆಂತೆ ಕಾಳು, 3-ಲವಂಗ, 1 ಚಕ್ಕೆ, 1 ಸ್ಪೂನ್-ಕಾಳು ಮೆಣಸು.

ಮಾಡುವ ವಿಧಾನ:

ಮೊದಲಿಗೆ ಕುಕ್ಕರ್ ಗೆ ತುಪ್ಪ ಹಾಕಿ ಅದಕ್ಕೆ ಅರಿಶಿನ ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಇದಕ್ಕೆ ಕತ್ತರಿಸಿಟ್ಟುಕೊಂಡ ಮಟನ್ ಹಾಕಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ತಿರುಗಿಸಿ. ಮಟನ್ ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಕೈಯಾಡಿಸಿ. ನಂತರ ಬಿಸಿ ನೀರು 2 ಕಪ್, ಸ್ವಲ್ಪ ಉಪ್ಪು ಹಾಕಿ. ಹದ ಉರಿಯಲ್ಲಿ ನಾಲ್ಕು ವಿಸಿಲ್ ಬರಿಸಿಕೊಳ್ಳಿ. ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಕೆಂಪು ಮೆಣಸಿನಕಾಯಿ, ಕೊತ್ತಂಬರಿಕಾಳು, ಜೀರಿಗೆ, ಮೆಂತೆ ಕಾಳು, ಸಾಸಿವೆ, ಲವಂಗ, ಚಕ್ಕೆ ಹಾಕಿ 3 ನಿಮಿಷ ಹುರಿದುಕೊಳ್ಳಿ. ನಂತರ ಇವಿಷ್ಟನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ತರಿತರಿಯಾಗಿ ಪುಡಿ ಮಾಡಿ. ನಂತರ ಇದಕ್ಕೆ ಬೆಳ್ಳುಳ್ಳಿ 5 ಎಸಳು, 1 ಈರುಳ್ಳಿ ಹಾಕಿ ರುಬ್ಬಿ ಕೊಳ್ಳಿ. ನಂತರ ಒಂದು ಪಾತ್ರೆಯನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ತುಪ್ಪ ಹಾಕಿ. ಇದಕ್ಕೆ ಬೇಯಿಸಿಟ್ಟುಕೊಂಡ ಮಟನ್ ಹಾಕಿ ಜತೆಗೆ ರುಬ್ಬಿಕೊಂಡ ಮಸಾಲೆ ಕೂಡ ಸೇರಿಸಿ. ಚೆನ್ನಾಗಿ ಕೈಯಾಡಿಸಿ 10 ನಿಮಿಷ ಚೆನ್ನಾಗಿ ಬೇಯಿಸಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿದರೆ ರುಚಿಕರವಾದ ಮಟನ್ ಗೀ ರೋಸ್ಟ್ ಸವಿಯಲು ಸಿದ್ಧ.

Comments (0)
Add Comment