ರುಚಿಕರವಾದ ಮೃದುವಾದ, ರುಚಿ ರುಚಿ ಮಂಡಕ್ಕಿ ದೋಸೆ ಮಾಡುವ ವಿಧಾನ

ಚುರುಮುರಿ (ಮಂಡಕ್ಕಿ)ಯಿಂದ ಮಾಡಿದ ದೋಸೆ ಟ್ರೈ ಮಾಡಿ. ಇದು ತುಂಬಾ ಮೃದುವಾಗಿರುತ್ತೆ ಜತೆಗೆ ಚೆನ್ನಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು:

2ಕಪ್ – ಚುರುಮುರಿ, ಅಕ್ಕಿ – 1 ಕಪ್, ಉಪ್ಪು – ರುಚಿಗೆ ತಕ್ಕಷ್ಟು, ನೀರು – ಅಗತ್ಯವಿರುವಷ್ಟು.

ಮಾಡುವ ವಿಧಾನ:

ಮೊದಲಿಗೆ ಅಕ್ಕಿಯನ್ನು ಒಂದು ಬೌಲ್ ಗೆ ಹಾಕಿ ಚೆನ್ನಾಗಿ ತೊಳೆದು ನೆನೆಸಿಡಿ. ಹಾಗೆಯೇ ಚುರುಮುರಿಯನ್ನು ಇನ್ನೊಂದು ಬೌಲ್ ಗೆ ಹಾಕಿ ನೀರು ಸೇರಿಸಿ 2 ಗಂಟೆಗಳ ಕಾಲ ನೆನೆಸಿಡಿ. ನಂತರ ಚುರುಮುರಿನ್ನು ತೆಗೆದುಕೊಂಡು ಅದರಲ್ಲಿರುವ ನೀರನ್ನೆಲ್ಲಾ ಕೈಯಿಂದ ಹಿಂಡಿ ತೆಗೆದು ಚುರುಮುರಿಯನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ನಯವಾಗಿ ರುಬ್ಬಿಕೊಂಡು ಒಂದು ಪಾತ್ರೆಗೆ ತೆಗೆದುಕೊಳ್ಳಿ.

ಇನ್ನು ಅಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿ ನಯವಾಗಿ ರುಬ್ಬಿಕೊಂಡು ಚುರುಮುರಿ ಮಿಶ್ರಣವಿರುವ ಪಾತ್ರೆಗೆ ಹಾಕಿ ಸ್ವಲ್ಪ ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಹಿಟ್ಟು ತುಂಬಾ ತೆಳು ಮಾಡಬೇಡಿ. ನಂತರ ರಾತ್ರಿಯಿಡೀ ಹಾಗೆಯೇ ಬಿಡಿ. ಬೆಳಿಗ್ಗೆ ಗ್ಯಾಸ್ ಮೇಲೆ ದೋಸಾ ಪ್ಯಾನ್ ಇಟ್ಟು ಸೆಟ್ ದೋಸೆ ರೀತಿ ದೋಸೆ ಮಾಡಿಕೊಳ್ಳಿ. ಕಾಯಿ ಚಟ್ನಿ ಜತೆ ಸವಿಯಿರಿ.

Comments (0)
Add Comment