ಲಾಂಗ್ ಡ್ರೈವ್ ನೆಪದಲ್ಲಿ ಪತ್ನಿಯನ್ನು ಗುಂಡಿಕ್ಕಿ ಕೊಂದು, ಆತ್ಮಹತ್ಯೆಗೆ ಶರಣಾದ ಪತಿ

ಘಾಜಿಯಾಬಾದ್: ಪತ್ನಿಯನ್ನು ಲಾಂಗ್ ಡ್ರೈವ್ ಗೆ ಕರೆದೊಯ್ದ ಪತಿ ಆಕೆಯನ್ನು ಗುಂಡಿಕ್ಕಿ ಕೊಂದು, ಬಳಿಕ ಆತನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ನಡೆದಿದೆ.

ಮೃತ ಪತಿಯನ್ನು ವಿನೋದ್ ಚೌದರಿ(39) ಹಾಗೂ ಪತ್ನಿಯನ್ನು ದೀಪಕ್ (36) ಎಂದು ಗುರುತಿಸಲಾಗಿದೆ.

ಪತಿ ಹಾಗೂ ಪತ್ನಿಯ ಮೃತದೇಹವು ಮಧುಬನ್ ಬಪುಧಾಮ್ ಬಳಿ ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ. ಪತಿ-ಪತ್ನಿಯ ತಲೆಯಲ್ಲಿ ಗುಂಡಿನ ಗಾಯಗಳು ಕಂಡುಬಂದಿವೆ ಹಾಗೂ ಪತಿ ವಿನೋದ್ ಕೈಯ ಬಳಿ ಗನ್ ಬಿದ್ದಿತ್ತು. ವಿನೋದ್ ಐದು ತಿಂಗಳ ಹಿಂದೆ ಕಿಡ್ನಿ ಸೋಂಕಿಗೆ ಚಿಕಿತ್ಸೆ ಪಡೆದಿದ್ದರು. ಹಾಗೂ ದಂಪತಿಗಳಿಗೆ ಹದಿಹರೆಯದ ಒಬ್ಬ ಗಂಡು ಮಗ ಮತ್ತು ಒಬ್ಬಳು ಹೆಣ್ಣು ಮಗಳಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮನೆಯವರಿಗೆ ಲಾಂಗ್ ಡ್ರೈವ್ ಗೆ ಹೋಗಿ ಬರುವುದಾಗಿ ಹೇಳಿ ವಿನೋದ್ ಹಾಗೂ ದೀಪಕ್ ರಾತ್ರಿ 10:30 ರ ವೇಳೆಗೆ ಹೊರಟಿರುತ್ತಾರೆ. ಆದರೆ ಇವರಿಬ್ಬರು ಮಧ್ಯರಾತ್ರಿ 2 ಗಂಟೆಯಾದರೂ ಹಿಂತಿರುಗಿ ಬಾರದೇ ಇದ್ದುದ್ದನ್ನು ಕಂಡ ಮನೆಯವರು ಅವರಿಗೆ ಕರೆ ಮಾಡಿದ್ದಾರೆ. ಕೊನೆಗೆ ವಿನೋದ್ ಹಾಗೂ ದೀಪಕ್ ಕರೆ ಸ್ವೀಕರಿಸದೇ ಇದ್ದುದರಿಂದ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ದಂಪತಿಯನ್ನು ಪತ್ತೆ ಹಚ್ಚಿಕೊಡುವಂತೆ ತಿಳಿಸಿದ್ದಾರೆ ಎಂದು ನಗರದ ಡಿಸಿಪಿ ಕುನ್ವಾರ್ ಜ್ಞಾನಂಜಯ್ ಸಿಂಗ್ ಹೇಳಿದ್ದಾರೆ.

ಇನ್ನು ದಂಪತಿ ಕಾರಿನಲ್ಲಿ ಸಾವನ್ನಪ್ಪಿರುವ ಬಗ್ಗೆ ದಾರಿಯಲ್ಲಿ ಹೋಗುತ್ತಿದ್ದ ವಾಹನ ಸವಾರರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Comments (0)
Add Comment