ಲೋಕಸಭಾ ಚುನಾವಣಾ ಎಫೆಕ್ಟ್ – ಮೊದಲ ಬಾರಿಗೆ ರಾಮನವಮಿಗೆ ಸಾರ್ವತ್ರಿಕ ರಜೆ ಘೋಷಿಸಿದ ದೀದಿ ಸರ್ಕಾರ

ಕೋಲ್ಕತಾ : ಲೋಕಸಭಾ ಚುನಾವಣೆಗೆ ದಿನಗಣನೆಗಳು ಆರಂಭವಾಗಿವೆ. ದೇಶದ ಪ್ರಮುಖ ಪಕ್ಷಗಳು ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸಿವೆ. ಅದರಲ್ಲಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಕೂಡಾ ಹಿಂದೆ ಬಿದ್ದಿಲ್ಲ. ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ರೆ ಸಾಕು ಸಿಡಿಮಿಡಿಗೊಳ್ಳುತ್ತಿದ್ದ ದೀದಿ ಈಗ ಇದೇ ಮೊದಲ ಬಾರಿಗೆ ರಾಮನವಮಿಗೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಈ ಸಂಬಂಧ ಪಶ್ಚಿಮ ಬಂಗಾಳ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ. ದುರ್ಗಾ ಪೂಜೆ ಮತ್ತು ಕಾಳಿ ಪೂಜೆ ಬಂಗಾಳದಲ್ಲಿ ಮೊದಲಿಂದಲೂ ಪ್ರಧಾನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಆ ಎರಡು ಹಿಂದೂ ಹಬ್ಬಗಳಿಗೆ ಅಲ್ಲಿ ಸಾರ್ವತ್ರಿಕ ರಜೆ ಇದೆ. ರಾಮನವಮಿಗೆ ರಜೆ ಘೋಷಿಸಿದ್ದು ಇದೇ ಮೊದಲು. ಈ ಹಿಂದೆ ರಾಮನವಮಿ ಹಬ್ಬದಂದು ಮೆರವಣಿಗೆ ನಡೆಯುವ ವೇಳೆ ಬಂಗಾಳದ ಕೆಲವೆಡೆ ಹಿಂಸಾಚಾರಗಳಾಗಿ, ಬಂಗಾಳ ಸರ್ಕಾರದ ವಿರುದ್ಧ ಟೀಕೆಗಳು ಕೇಳಿಬಂದಿದ್ದವು. ಅದರ ಬೆನ್ನಲ್ಲೇ ಲೋಕಸಭೆ ಚುನಾವಣೆಗೆ ಮುನ್ನ ಸರ್ಕಾರ ರಾಮನವಮಿಗೆ ರಜೆ ಘೋಷಿಸುವ ನಿರ್ಧಾರ ಮಾಡಿದೆ. ಬಂಗಾಳ ಸರ್ಕಾರ ರಾಮನವಮಿಗೆ ರಜೆ ಘೋಷಿಸಿರುವ ಕ್ರಮವನ್ನು ವಿಪಕ್ಷ ಬಿಜೆಪಿ ಸ್ವಾಗತಿಸಿದೆಯಾದರೂ ಸರ್ಕಾರದ ನಡೆಗೆ ವ್ಯಂಗ್ಯ ಮಾಡಿದೆ. ಬಂಗಾಳದಲ್ಲಿ ಕಾಲ ಬದಲಾಗುತ್ತಿದ್ದು, ಸರ್ಕಾರ ರಾಮನವಮಿಗೆ ರಜೆ ಘೋಷಿಸುವುದು ಅನಿವಾರ್ಯವಾಯಿತು. ಹಿಂದೂ ವಿರೋಧಿ ಹಣೆಪಟ್ಟಿ ತೊಡೆದುಹಾಕಲು ಸಿಎಂ ಮಮತಾ ಬ್ಯಾನರ್ಜಿ ಈ ಕ್ರಮ ಕೈಗೊಂಡಿದ್ದಾರೆ. ಆದರೆ, ಜೈ ಶ್ರೀರಾಮ್ ಎಂದರೆ ಬೆಂಕಿಯಂತಾಗುವ ವ್ಯಕ್ತಿಯಿಂದ ಈ ನಡೆ ಬಹಳ ನಿಧಾನವಾಯಿತು ಎಂದು ಬಿಜೆಪಿ ನಾಯಕ ಅಮಿತ್ ಮಾಲವೀಯ ಲೇವಡಿ ಮಾಡಿದ್ದಾರೆ.

Comments (0)
Add Comment