ಲೋಕಸಭಾ ಚುನಾವಣೆ ಹಿನ್ನೆಲೆ ಮದುವೆ ಸಮಾರಂಭ, ಧಾರ್ಮಿಕ ಕಾರ್ಯಕ್ರಮಗಳಿಗೆ ಚುನಾವಣಾಧಿಕಾರಿ ಅನುಮತಿ ಬೇಕಿಲ್ಲ: ಚುನಾವಣಾ ಆಯೋಗ

ಲೋಕಸಭಾ ಚುನಾವಣೆ ಘೋಷಣೆ ಹಿನ್ನೆಲೆ ನೀತಿ ಸಂಹಿತೆ ರಾಜ್ಯಾಧ್ಯಂತ ಜಾರಿಗೊಂಡಿದೆ. ಈ ಸಂದರ್ಭ ಮದುವೆ ಸಮಾರಂಭ, ಧಾರ್ಮಿಕ ಕಾರ್ಯಕ್ರಮಗಳಿಗೆ ಚುನಾವಣಾಧಿಕಾರಿ ಅನುಮತಿ ಕಡ್ಡಾಯ ಎನ್ನಲಾಗುತ್ತಿತ್ತು.

ಆದರೆ ಚುನಾವಣಾ ಆಯೋಗವು ಮದುವೆ ಸಮಾರಂಭ, ಧಾರ್ಮಿಕ ಕಾರ್ಯಗಳಿಗೆ ಅನುಮತಿ ಕಡ್ಡಾಯವಲ್ಲ ಎಂಬುದಾಗಿ ಸ್ಪಷ್ಟಪಡಿಸಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಚುನಾವಣಾ ಆಯೋಗವು, ಮಾದರಿ ಚುನಾವಣೆ ನೀತಿ ಸಂಹಿತೆ ಎನ್ನುವುದು ರಾಜಯಕೀಯ ಪಕ್ಷಗಳು, ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ಹಾಗೂ ಸರ್ಕಾರಿ ನೌಕರರಿಗೆ ಅನ್ವಯಿಸುತ್ತದೆ. ಸಾರ್ವಜನಿಕರರಿಗೆ ಯಾವುದೇ ನಿರ್ಬಂಧವಿಲ್ಲ.

ಮದುವೆ ಸೇರಿದಂತೆ ಯಾವುದೇ ಕೌಟುಂಬಿಕ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲು ಚುನಾವಣಾಧಿಕಾರಿಗಳ ಅನುಮತಿ ಬೇಕಿಲ್ಲ ಎಂದು ತಿಳಿಸಿದೆ. ಯಾವುದೇ ಧಾರ್ಮಿಕ ಆಚಾರ-ವಿಚಾರ, ಸಂಪ್ರದಾಯಗಳಿಗೆ ಮಾದರಿ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಇದಕ್ಕೆ ಅನುಮತಿ ಪಡೆಯುವ ಅಗತ್ಯವೂ ಇಲ್ಲ. ಆದರೆ ಧಾರ್ಮಿಕ ಆಚರಣೆಗಳು ರಾಜಕೀಯ ಕಾರ್ಯಕ್ರಮಗಳಾಗಿ ಪರಿವರ್ತನೆಯಾಗಬಾರದು. ರಾಜಕೀಯ ಕಾರ್ಯಕ್ರಮವಾಗಿ ಪರಿವರ್ತನೆಯಾದರೆ ಅದು ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ ಎಂದು ಹೇಳಿದೆ.

Comments (0)
Add Comment