ಲೋಕಸಭೆಯಿಂದ ಅಮಾನತಾದ ಸಂಸದರ ಸಂಖ್ಯೆ 33 ಕ್ಕೆ ಏರಿಕೆ

ನವದೆಹಲಿ: ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವರನ್ನು ಡಿ. 18 ಸೋಮವಾರ ಲೋಕಸಭೆಯಿಂದ ಅಮಾನತುಗೊಳಿಸಲಾಗಿದ್ದು, ಹೀಗಾಗಿ ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಅಮಾನತುಗೊಂಡಿರುವ ಸದಸ್ಯರ ಸಂಖ್ಯೆ ಇಂದು 33ಕ್ಕೆ ಏರಿದೆ. ಸಂಸತ್ತಿನ ಉಭಯ ಸದನಗಳಿಂದ ಇದುವರೆಗೆ 47 ವಿರೋಧ ಪಕ್ಷದ ಸದಸ್ಯರನ್ನು ಅಮಾನತುಗೊಳಿಸಲಾಗಿದೆ.

ಡಿಸೆಂಬರ್ 13 ರಂದು ನಡೆದ ಸಂಸತ್ತಿನಲ್ಲಿ ನಡೆದ ಭದ್ರತಾ ಉಲ್ಲಂಘನೆಯ ಘಟನೆಯ ಬಗ್ಗೆ ವಿರೋಧ ಪಕ್ಷದ ಸಂಸದರು ನಡೆಸಿದ ಗದ್ದಲದ ಬಳಿಕ ಅಮಾನತಿನ ಸಂಖ್ಯೆ ಹೆಚ್ಚಾಗಿದೆ. ಇದಲ್ಲದೇ ಇನ್ನೂ ಮೂವರು ಸಂಸದರನ್ನು ವಿಶೇಷಾಧಿಕಾರ ಸಮಿತಿ ವರದಿ ಬರುವವರೆಗೆ ಅಮಾನತುಗೊಳಿಸಲಾಗಿದೆ.

ಅಮಾನತುಗೊಂಡ ಸಂಸದರ ಪಟ್ಟಿಯಲ್ಲಿ ಕಾಂಗ್ರೆಸ್‌ನ ಸಂಸದ ಅಧೀರ್ ರಂಜನ್ ಚೌಧರಿ, ಸದನದಲ್ಲಿ ಪಕ್ಷದ ಉಪನಾಯಕ ಗೌರವ್ ಗೊಗೊಯ್ ಸೇರಿದ್ದಾರೆ. ಇದಲ್ಲದೇ ತೃಣಮೂಲ ಸಂಸದರಾದ ಕಲ್ಯಾಣ್ ಬ್ಯಾನರ್ಜಿ, ಕಾಕೋಲಿ ಘೋಷ್ ದಸ್ತಿದಾರ್, ಸೌಗತ ರೇ ಮತ್ತು ಸತಾಬ್ದಿ ರಾಯ್ ಮತ್ತು ಡಿಎಂಕೆ ಸದಸ್ಯರಾದ ಎ ರಾಜಾ ಮತ್ತು ದಯಾನಿಧಿ ಮಾರನ್ ಕೂಡ ಈ ಪಟ್ಟಿಯಲ್ಲಿದ್ದಾರೆ.

“ಈ ಸರ್ಕಾರ ಸರ್ವಾಧಿಕಾರದ ಪರಮಾವಧಿಯನ್ನು ತಲುಪಿದೆ.ಸಂಸತ್ತನ್ನು ಬಿಜೆಪಿ ಕೇಂದ್ರ ಕಚೇರಿ ಎಂದು ಪರಿಗಣಿಸುತ್ತಿದೆ. ಅಧಿವೇಶನ ಆರಂಭವಾದಾಗಿನಿಂದ ಪ್ರತಿಪಕ್ಷಗಳು ಸರ್ಕಾರಕ್ಕೆ ಸಹಕಾರ ನೀಡುತ್ತಿವೆ. ಆದರೆ ಬಿಜೆಪಿ ಸರ್ಕಾರವು ಪ್ರತಿಪಕ್ಷಗಳನ್ನು ಬುಲ್ಡೋಜರ್ ಮಾಡುತ್ತಿದೆ” ಎಂದು ಸಂಸದ ಅಧೀರ್ ರಂಜನ್ ಚೌಧರಿ ಆರೋಪಿಸಿದ್ದಾರೆ.

Comments (0)
Add Comment