ಲೋಕಸಭೆಯ ಟಿಕೆಟ್ ಆಫರ್ ನಿರಾಕರಿಸಿದ ನಟ ಶಿವರಾಜ್‌ ಕುಮಾರ್‌

ಬೆಂಗಳೂರು: ಕಾಂಗ್ರೆಸ್ ಲೋಕಸಭೆಯ ಟಿಕೆಟ್ ಆಫರ್ ಅನ್ನು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಶಿವರಾಜ್‌ ಕುಮಾರ್‌ ಅವರಿಗೆ ಕೊಟ್ಟರು.ಆದರೆ ಶಿವರಾಜ್‌ ಕುಮಾರ್‌ ಆ ಆಫ‌ರ್‌ ಅನ್ನು ಒಳ್ಳೆಯ ರೀತಿಯಲ್ಲಿ ನಿರಾಕರಿಸಿದರು.

ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜಾಗೃತ ಸಮಾವೇಶದಲ್ಲಿ ಮಾತನಾಡುತ್ತಾ ಲೋಕಸಭೆಯ ಟಿಕೆಟ್ ಆಫರ್ ಅನ್ನು ಶಿವರಾಜ್ ಕುಮಾರ್ ಅವರಿಗೆ ನೀಡಿದ್ದು ಅದನ್ನು ಅವರು ನಿರಾಕರಿಸಿದರು.

ಡಿ.ಕೆ. ಶಿವಕುಮಾರ್ ಸಮಾವೇಶದಲ್ಲಿ ಮಾತನಾಡುತ್ತಾ‌ ನೀನು ರೆಡಿಯಾಗಪ್ಪ ಪಾರ್ಲಿಮೆಂಟ್‌ಗೆ ನಿಂತುಕೊಳ್ಳೋಕೆ. ನಿನಗೆ ಎಲ್ಲಿ ಬೇಕೋ ಅಲ್ಲಿ ಸೀಟು ಕೊಡುತ್ತೇನೆ ಎಂದು ಶಿವರಾಜ್‌ ಕುಮಾರ್‌ಗೆ ಹೇಳಿದ್ದೆ. ಇಲ್ಲ ಐದಾರು ಸಿನಿಮಾ ಒಪ್ಪಿಕೊಂಡು ಬಿಟ್ಟಿದ್ದೇನೆ ಎಂದು ಅವರು ಹೇಳಿದ್ದಾರೆ.

ಸಿನಿಮಾ ಯಾವಾಗ ಬೇಕಾದರೂ ಮಾಡಬಹುದು, ಪಾರ್ಲಿಮೆಂಟ್‌ಗೆ ಹೋಗುವ ಯೋಗ ಸುಲಭವಾಗಿ ಬರುವುದಿಲ್ಲ. ಆ ಯೋಗ ಮನೆ ಬಾಗಿಲಿಗೆ ಬಂದಿದೆ. ಅವಕಾಶ ತಪ್ಪಿಸಿಕೊಳ್ಳಲು ಹೋಗ ಬೇಡಿ ಎಂದು ಡಿ.ಕೆ.ಶಿವಕುಮಾರ್‌ ಸಮಾವೇಶದಲ್ಲಿ ಬಹಿರಂಗವಾಗಿ ಶಿವರಾಜ್‌ ಕುಮಾರ್‌ಗೆ ಎಂಪಿ ಟಿಕೆಟ್‌ ಆಫ‌ರ್‌ ಕೊಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಶಿವರಾಜ್‌ ಕುಮಾರ್‌, ನಮ್ಮ ತಂದೆ ಕೊಟ್ಟಿರುವ ಬಳವಳಿ ಬಣ್ಣ ಹಚ್ಚೋದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ನಮ್ಮದೇನಿದ್ದರೂ ಮೇಕಪ್‌ ಹಾಕೋದು, ಸಿನಿಮಾ ಮಾಡೋದು. ರಾಜಕೀಯ ನಮಗೆ ಬೇಡ, ಅದನ್ನು ಮಾಡೋಕೆ ಬೇರೆಯವರು ಇದ್ದಾರೆ. ನನಗೆ ರಾಜಕೀಯ ಬೇಡ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

 

Comments (0)
Add Comment