ಲೋಕಸಭೆ ಭದ್ರತಾ ಲೋಪ : ಪ್ರತಾಪ್‌ ಸಿಂಹ ಅವರನ್ನು ಸಂಸತ್‌ ಸದಸ್ಯ ಸ್ಥಾನದಿಂದ ವಜಾಗೊಳಿಸುವಂತೆ ಕಾಂಗ್ರೆಸ್ ಆಗ್ರಹ

ಬೆಂಗಳೂರು:ಇಂದು ನಡೆದ ಲೋಕಸಭೆ ಭದ್ರತಾ ಲೋಪ ವಿಚಾರದಲ್ಲಿ ಆರೋಪಿಗಳು ಮೈಸೂರು ಸಂಸದ ಪ್ರತಾಪ್‌ ಸಿಂಹ ಅವರಿಂದ ಪಾಸ್‌ ಪಡೆದಿದ್ದರು ಎನ್ನುವ ವಿಚಾರ ಬಹಿರಂಗವಾಗಿದ್ದು ಈ ಬೆನ್ನಲೇ ಕಾಂಗ್ರೆಸ್ ಟ್ವೀಟ್ ವೊಂದನ್ನು ಮಾಡಿದೆ.

ಈ ಸಂಸತ್‌ ದಾಳಿಯ ಹಿಂದೆ ಪ್ರತಾಪ್‌ ಸಿಂಹ ಅವರ ಪ್ರಮುಖ ಪಾತ್ರವಿದೆ ಹಾಗಾಗಿ ತನಿಖೆ ಮುಗಿಯುವವರೆಗೂ ಪ್ರತಾಪ್‌ ಸಿಂಹ ಅವರನ್ನು ಸಂಸತ್‌ ಸದಸ್ಯ ಸ್ಥಾನದಿಂದ ವಜಾ ಮಾಡಿ ಎಂದು ಕರ್ನಾಟಕ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.ಅದರೊಂದಿಗೆ ಇಡೀ ಭದ್ರತಾ ಲೋಪಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ದೂಷಿಸಿದೆ.

2001ರಲ್ಲಿ ಇದೇ ದಿನ ಸಂಸತ್ ಭವನದ ಮೇಲೆ ಉಗ್ರರ ದಾಳಿಯಾಗಿತ್ತು, ಆಗಲೂ ಬಿಜೆಪಿ ಆಡಳಿತವಿತ್ತು. ಈ ದಾಳಿಯಲ್ಲಿ ಪ್ರತಾಪ್ ಸಿಂಹರ ಹೆಸರು ಮೇಲ್ನೋಟದಲ್ಲೇ ಕಂಡುಬಂದಿದೆ. ಸ್ಪೀಕರ್ ಓಂ ಬಿರ್ಲಾ ಅವರು ಕೂಡಲೇ ಪ್ರತಾಪ್‌ ಸಿಂಹ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ವಜಾಗೊಳಿಸಿ ಎಂದು ಕರ್ನಾಟಕ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ಸಂಸತ್ ಭವನದೊಳಗೆ ಟಿಯರ್ ಗ್ಯಾಸ್ ಸ್ಪೋಟಿಸಿದ ಆಗಂತುಕರಿಗೆ ಅಕಸ್ಮಾತ್ ಕಾಂಗ್ರೆಸ್ ಸಂಸದರಿಂದ ಪಾಸ್ ಸಿಕ್ಕಿದಿದ್ದರೆ ಬಿಜೆಪಿಗರು ಹೇಗೆ ವರ್ತಿಸುತ್ತಿದ್ದರು? ಈಗೇಕೆ ಬಿಜೆಪಿ ನಾಯಕರು ಏನೂ ಆಗಿಯೇ ಇಲ್ಲ ಎಂಬಂತೆ ಮುಗುಮ್ಮಾಗಿದ್ದಾರೆ? ಭದ್ರತಾ ಲೋಪದ ಬಗ್ಗೆ ಬಿಜೆಪಿ ನಾಯಕರು ತುಟಿ ಬಿಚ್ಚದಿರುವುದೇಕೆ? ದೇಶ ರಕ್ಷಣೆಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿರುವುದಕ್ಕೆ ಇದು ಸ್ಪಷ್ಟ ಉದಾಹರಣೆಯಲ್ಲವೇ? ಎಂದು ಬಿಜೆಪಿಗೆ ಟ್ಯಾಗ್‌ ಮಾಡಿ ಕರ್ನಾಟಕ ಕಾಂಗ್ರೆಸ್‌ ಪ್ರಶ್ನೆ ಮಾಡಿದೆ.

Comments (0)
Add Comment