ವಿಶ್ವದ ಅತ್ಯಂತ ವಿಷಕಾರಿ ಮೀನು – ಭಾರತ ಪೆಸಿಫಿಕ್ ಸಾಗರಗಳ ಕರಾವಳಿ ಪ್ರದೇಶಗಳಲ್ಲಿ ಕಂಡುಬರುವ ಕಲ್ಲುಮೀನು

ವಿಶ್ವದ ಅತ್ಯಂತ ವಿಷಕಾರಿ ಮೀನು ಎಂದರೆ ಅದು ಕಲ್ಲುಮೀನು. ಭಾರತೀಯ ಮತ್ತು ಪೆಸಿಫಿಕ್ ಸಾಗರಗಳ ಕರಾವಳಿ ಪ್ರದೇಶಗಳಲ್ಲಿ 5 ಜಾತಿಯ ಕಲ್ಲು ಮೀನುಗಳು ಕಂಡು ಬರುತ್ತವೆ. ಅವುಗಳೆಂದರೆ, ಮಿಡ್ಜೆಟ್ ಸ್ಟೋನ್ ಫಿಶ್ (ಸಿನಾನ್ಸಿಯಾ ಅಲುಲಾ), ಎಸ್ಟುವಾರಿನ್ ಸ್ಟೋನ್‌ಫಿಶ್ (ಸಿನಾನ್ಸಿಯಾ ಹಾರಿಡಾ), ಕೆಂಪು ಸಮುದ್ರದ ಕಲ್ಲುಮೀನು (ಸಿನಾನ್ಸಿಯಾ ನಾನಾ), ಸಿನಾನ್ಸಿಯಾ ಪ್ಲಾಟಿರಿಂಚಾ, ಸ್ಟೋನ್‌ಫಿಶ್ (ಸಿನಾನ್ಸಿಯಾ ವೆರುಕೋಸ್) ಕೆಲವು ಜಾತಿಯ ಕಲ್ಲುಮೀನುಗಳು ನದಿಗಳಲ್ಲಿ ವಾಸಿಸುತ್ತವೆ.

ಕಲ್ಲುಮೀನು ಹವಳದ ಬಂಡೆಗಳು ಮತ್ತು ನೀರೊಳಗಿನ ಬಂಡೆಗಳ ಹತ್ತಿರ ವಾಸಿಸುತ್ತವೆ. ಇದರ ದೇಹದಾದ್ಯಂತ ಪಾಚಿಗಳ ಬೆಳವಣಿಗೆಯನ್ನು ಹೊಂದಿದೆ. ತನ್ನ ದೇಹದ ಮೇಲೆ ಬೆಳೆದ ಪಾಚಿಯನ್ನು ಪರಭಕ್ಷಕಗಳನ್ನು ತಪ್ಪಿಸಲು ಮರೆಮಾಚುವಿಕೆಯಾಗಿ ಬಳಸುತ್ತದೆ ಮತ್ತು ಸಾಮಾನ್ಯವಾಗಿ ಸಾಗರ ತಳದಲ್ಲಿ ಉಸುಕಿನಿಂದ ತನ್ನ ದೇಹವನ್ನು ಮುಚ್ಚಿಕೊಂಡು ಕಲ್ಲಿನಂತೆ ಕಾಣಿಸುತ್ತದೆ ಹಾಗಾಗಿ ಇದನ್ನು “ಕಲ್ಲುಮೀನು” ಎಂದು ಕರೆಯುತ್ತಾರೆ. ಕಲ್ಲುಮೀನನ್ನು ಏಷ್ಯಾದಲ್ಲಿ ಸವಿಯಾದ ಪದಾರ್ಥವಾಗಿ ಸೇವಿಸಲಾಗುತ್ತದೆ. ಅದರ ಅಸಾಮಾನ್ಯ ನೋಟದಿಂದಾಗಿ ಪ್ರಪಂಚದಾದ್ಯಂತ ಮೀನುಗಳ ತೊಟ್ಟೆಗಳಲ್ಲಿ (ಅಕ್ವೇರಿಯಂ) ಇರಿಸಲಾಗುತ್ತದೆ. ಮಾನವ ಚಟುವಟಿಕೆಯು ಕಲ್ಲುಮೀನುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿದೆ ಎಂಬ ವಾಸ್ತವದ ಹೊರತಾಗಿಯೂ, ಅವುಗಳ ಸಂಖ್ಯೆಯು ಇನ್ನೂ ದೊಡ್ಡದಾಗಿದೆ ಮತ್ತು ಸ್ಥಿರವಾಗಿದೆ. ಕಲ್ಲುಮೀನು ಅಳಿವಿನಂಚಿನಲ್ಲಿರುವ ಜಾತಿಗಳ ಪಟ್ಟಿಯಲ್ಲಿಲ್ಲ. ಕಲ್ಲುಮೀನಿನ ಗಾತ್ರವು ಜಾತಿಯ ಮೇಲೆ ಅವಲಂಬಿತವಾಗಿರುತ್ತದೆ. ಇದು ಸಾಮಾನ್ಯವಾಗಿ 35 ಸೆಂ.ಮೀ ನಿಂದ 50 ಸೆಂ.ಮೀನಷ್ಟು ಉದ್ದ ಮತ್ತು 2.268 ಕೆಜಿ ತೂಕದಷ್ಟಿರುತ್ತದೆ. ಕಲ್ಲುಮೀನಿನ ದೇಹವು ಕೆಂಪು, ಕಿತ್ತಳೆ ಅಥವಾ ಹಳದಿ ಬಣ್ಣದ ತೇಪೆಗಳೊಂದಿಗೆ ಸುತ್ತುವರಿದ ಕಂದು ಅಥವಾ ಬೂದು ಚರ್ಮದಿಂದ ಮುಚ್ಚಲ್ಪಟ್ಟಿದೆ. ಕಲ್ಲುಮೀನು ಸುತ್ತ-ಮುತ್ತಲಿನ ಪರಿಸರದೊಂದಿಗೆ ಸುಲಭವಾಗಿ ಮಿಶ್ರಣಗೊಳ್ಳುತ್ತದೆ. ಕಲ್ಲುಮೀನಿನ ಬೆನ್ನಿನ ರೆಕ್ಕೆಯು 13 ಮುಳ್ಳುಗಳನ್ನು ಹೊಂದಿದೆ. ಕಲ್ಲುಮೀನಿಗೆ ಬೆದರಿಕೆ ಬಂದಾಗಲೆಲ್ಲಾ ಈ ಮುಳ್ಳುಗಳನ್ನು ನೆಟ್ಟಗೆ ನಿಲ್ಲಿಸುತ್ತದೆ. ಕಲ್ಲುಮೀನಿನಲ್ಲಿ 2 ಸೊಂಟದ ಮತ್ತು 3 ಗುದದ ಮುಳ್ಳುಗಳಿವೆ, ಆದರೆ ಅವು ಚರ್ಮದಲ್ಲಿ ಅಡಗಿರುತ್ತವೆ. ಪ್ರತಿ ಬೆನ್ನೆಲುಬಿನ ಮೇಲೆ ಇರುವ ಮುಳ್ಳುಗಳ ಕೆಳಭಾಗದ ಗ್ರಂಥಿಯಲ್ಲಿ ವಿಷವು ಉತ್ಪತ್ತಿಯಾಗುತ್ತದೆ. ಒತ್ತಡದ ಅನ್ವಯದ ನಂತರ ವಿಷವು ಬಿಡುಗಡೆಯಾಗುತ್ತದೆ. ಮರಳಿನಲ್ಲಿ ಅಡಗಿರುವ ಮೀನಿನ ಮೇಲೆ ಹೆಜ್ಜೆ ಹಾಕಿದ ನಂತರ ವಿಷವನ್ನು ಬಿಡುಗಡೆ ಮಾಡುತ್ತದೆ. ಬಿಡುಗಡೆಯಾದ ವಿಷದ ಪ್ರಮಾಣವು ಒತ್ತಡಕ್ಕೆ ಅನುಗುಣವಾಗಿರುತ್ತದೆ. ದೊಡ್ಡ ಒತ್ತಡ – ದೊಡ್ಡ ಪ್ರಮಾಣದ ವಿಷ, ಸಣ್ಣ ಒತ್ತಡ- ಸಣ್ಣ ಪ್ರಮಾಣದ ವಿಷ ಬಿಡುಗಡೆ ಮಾಡುತ್ತದೆ.

ಖಾಲಿ ವಿಷದ ಚೀಲಗಳು ಒಂದೆರಡು ವಾರಗಳಲ್ಲಿ ಮರುಪೂರಣಗೊಳ್ಳುತ್ತದೆ. ಕಲ್ಲುಮೀನಿನಿಂದ ಉತ್ಪತ್ತಿಯಾಗುವ ಕೇವಲ 18 ಮೀ.ಗ್ರಾಂ ವಿಷವು ಮಾರಣಾಂತಿಕವಾಗಿದೆ. ತೀವ್ರವಾದ ನೋವು, ಪಾರ್ಶ್ವವಾಯು ಮತ್ತು ಅಂಗಾಂಶ ನೆಕ್ರೋಸಿಸ್ (ಊತಕ ಮತ್ತು ಗ್ಯಾಂಗ್ರೀನ್) ಅನ್ನು ಪ್ರೇರೇಪಿಸುತ್ತದೆ. ಇದು ಹೃದಯಾಘಾತಕ್ಕೆ ಕಾರಣವಾಗಬಹುದು, ತ್ವರಿತ ವೈದ್ಯಕೀಯ ಸಹಾಯ ಅತ್ಯಗತ್ಯ. ಸಂಪೂರ್ಣ ಚೇತರಿಕೆಗೆ ಸಾಕಷ್ಟು ಪ್ರಮಾಣದ ಪ್ರತಿವಿಷದ ಅಗತ್ಯವಿರುತ್ತದೆ. ಕಲ್ಲುಮೀನು ಒಂದು ಮಾಂಸಾಹಾರಿ . ಇದರ ಆಹಾರವು ವಿವಿಧ ರೀತಿಯ ಮೀನುಗಳನ್ನು, ಕಠಿಣ ಚರ್ಮಿಗಳನ್ನು ಮತ್ತು ಸೀಗಡಿಗಳನ್ನು ಒಳಗೊಂಡಿದೆ. ಕಲ್ಲುಮೀನು ತನ್ನ ಬೇಟೆಯನ್ನು ಅಚ್ಚರಿಯ ಅಂಶವನ್ನು ಬಳಸಿಕೊಂಡು ಬೇಟೆಯಾಡುತ್ತದೆ. ಬೇಟೆಯು ಕಾಣಿಸಿಕೊಳ್ಳುವವರೆಗೆ ತಾಳ್ಮೆಯಿಂದ ಕಾಯುತ್ತದೆ ಮತ್ತು ಕಣ್ಣು ಮಿಟುಕಿಸುವುದರೊಳಗೆ ಅದನ್ನು ನುಂಗುತ್ತದೆ. ಸಂಪೂರ್ಣ ದಾಳಿಯು 0.015 ಸೆಕೆಂಡುಗಳವರೆಗೆ ಇರುತ್ತದೆ. ಕಲ್ಲುಮೀನು ಬೇಟೆಯನ್ನು ಅಟ್ಟಿಸಿಕೊಂಡು ಹೋಗುವುದನ್ನು ಹೊರತುಪಡಿಸಿ, ನಿಧಾನವಾದ ಈಜುಗಾರ. ಕಲ್ಲುಮೀನಗಳನ್ನು ದೊಡ್ಡ ತಿಮಿಂಗಿಲುಗಳು, ಹಾವು ಮೀನುಗಳು, ಸಮುದ್ರ ಹಾವುಗಳು ತಿನ್ನುತ್ತವೆ. ಇತರ ಜಾತಿಯ ಮೀನುಗಳಿಗಿಂತ ಭಿನ್ನವಾಗಿ, ಕಲ್ಲುಮೀನು ನೀರಿನ ಹೊರಗೆ 24 ಗಂಟೆಗಳ ಕಾಲ ಬದುಕಬಲ್ಲದು. ಕಲ್ಲು ಮೀನಿನ ಮತ್ತೊಂದು ಕುತೂಹಲಕಾರಿ ಲಕ್ಷಣವೆಂದರೆ ಅದು ನೀರನ್ನು ಉಗುಳಬಲ್ಲದು. ಕಲ್ಲುಮೀನು ಒಂಟಿ ಜೀವಿಯಾಗಿ ಅಥವಾ ಗುಂಪಿನ ಭಾಗವಾಗಿ ಬದುಕಬಲ್ಲದು. ಇತರ ಅನೇಕ ಸಮುದ್ರಜೀವಿಗಳಂತೆ, ಫಲೀಕರಣವು ನೀರಿನಲ್ಲಿ ನಡೆಯುತ್ತದೆ. ಹೆಣ್ಣು ದೊಡ್ಡ ಸಂಖ್ಯೆಯ ಮೊಟ್ಟೆಗಳನ್ನು ಬಿಡುಗಡೆ ಮಾಡುತ್ತದೆ, ಮೊಟ್ಟೆಗಳ ಮೇಲೆ ಪುರುಷ ಕಲ್ಲುಮೀನು ತನ್ನ ವೀರ್ಯವನ್ನು ಸಿಂಪಡನೆ ಮಾಡುತ್ತದೆ. ಈ ಮೊಟ್ಟೆಗಳು ಅನೇಕ ಸಮುದ್ರಜೀವಿಗಳಿಗೆ ಆಹಾರವಾಗಿದೆ. ಕಡಿಮೆ ಸಂಖ್ಯೆಯ ಫಲವತ್ತಾದ ಮೊಟ್ಟೆಗಳು ಮಾತ್ರ ಉಳಿದುಕೊಂಡು ಪ್ರಬುದ್ಧತೆಯನ್ನು ತಲುಪುತ್ತವೆ. ಈ ಕಲ್ಲುಮೀನುಗಳು “ಲ್ಯಾಕ್ರಿಮಲ್ ಸೇಬರ್” ಎಂದು ಕರೆಯಲ್ಪಡುವ ಬಾಗುಕತ್ತಿಯ ಹಾಗೆ ಇರುವ ಮಾರಣಾಂತಿಕ ಆಯುಧವನ್ನು ಹೊಂದಿರುತ್ತವೆ. ಇದು ಸ್ವಿಚ್‌ಬ್ಲೇಡ್‌ಗೆ ಸಮನಾಗಿರುತ್ತದೆ ಮತ್ತು ಈ ಜೀವಿಗಳ ತಲೆಯ ಮೇಲೆ ನೇರವಾಗಿ ಇದೆ, ಮೀನಿನ ಕಣ್ಣುಗಳ ಅಡಿಯಲ್ಲಿ ಮೂಳೆಯಿಂದ ಬೆಳೆಯುತ್ತದೆ. ಈ ಕಲ್ಲುಮೀನುಗಳು ಅಪಾಯವನ್ನು ಅನುಭವಿಸಿದಾಗ “ಲ್ಯಾಕ್ರಿಮಲ್ ಸೇಬರ್” ಅನ್ನು ಹೊರಹಾಕುವ ಸಾಮರ್ಥ್ಯವನ್ನೂ ಹೊಂದಿರುತ್ತವೆ. ಕಲ್ಲುಮೀನುಗಳು ತಮ್ಮ ಮುಳ್ಳುಗಳಿಂದ ನಮ್ಮ ದೇಹಕ್ಕೆ ಚುಚ್ಚಿದಾಗ ನಾವು ಬಿಸಿನೀರು ಅಥವಾ ವಿನೆಗರ್ ಅನ್ನು ಆ ಗಾಯಕ್ಕೆ ಅನ್ವಯಿಸಿಬೇಕು ಇದರಿಂದ ನೋವು ಕಡಿಮೆಯಾಗುತ್ತದೆ. ನಂತರ, ವೈದ್ಯರ ಬಳಿಗೆ ಹೋಗಿ ಆಂಟಿವೆನಮ್ (ಪ್ರತಿವಿಷ) ಪಡೆಯಬೇಕು. ಕಲ್ಲುಮೀನು 5 ರಿಂದ 10 ವರ್ಷಗಳವರೆಗೆ ಬದುಕಬಲ್ಲದು. ಲೇಖಕರು ಶ್ರೀ.ನವೀನ.ಪ್ಯಾಟಿಮನಿ ಚರ್ಮ ಪ್ರಸಾಧನ ಕಲಾ ತಜ್ಞರು ಪ್ರಾಣಿಶಾಸ್ತ್ರ ವಸ್ತುಸಂಗ್ರಹಾಲಯ ಪ್ರಾಣಿಶಾಸ್ತ್ರ ವಿಭಾಗ, ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯ, ಧಾರವಾಡ.

Comments (0)
Add Comment