ವೀಳ್ಯದೆಲೆಯ ಆರೋಗ್ಯ ಪ್ರಯೋಜನ ತಿಳಿಯಿರಿ

ಭಾರತೀಯ ಸಂಪ್ರದಾಯದಲ್ಲಿ ವೀಳ್ಯದೆಲೆಗೆ ಹೆಚ್ಚಿನ ಮಹತ್ವವಿದೆ. ಕರಾವಳಿ ಕರ್ನಾಟಕದಲ್ಲಿ ಶುಭಕಾರ್ಯಗಳಿಗೂ ಎಲೆ ಅಡಿಕೆ ಬೇಕೇ ಬೇಕು. ವೀಳ್ಯದೆಲೆ ಜೀವಸತ್ವವನ್ನು ಹೊಂದಿದ್ದು ಇದನ್ನು ನಿತ್ಯ ಊಟವಾದ ಬಳಿಕ ತಾಂಬೂಲದ ರೂಪದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.ಮುಖ್ಯವಾಗಿ ಮಕ್ಕಳ ಆರೋಗ್ಯಕ್ಕೆ ವೀಳ್ಯದೆಲೆ ಬಹಳ ಉಪಯುಕ್ತ. ವೀಳ್ಯದೆಲೆಯಿಂದ ಆಗುವ ಉಪಯೋಗಗಳು ಏನು ಎಂಬುದು ತಿಳಿದುಕೊಳ್ಳೋಣ.

ಒಂದು ಚಮಚದಷ್ಟು ವೀಳ್ಯದೆಲೆಯ ರಸವನ್ನು ಮಕ್ಕಳಿಗೆ ಕೊಡುವುದರಿಂದ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಬಹುದು.ವೀಳ್ಯದೆಲೆಯನ್ನು ಎಳ್ಳೆಣ್ಣೆಯಲ್ಲಿ ನೆನೆಸಿ ಸ್ವಲ್ಪ ಬಿಸಿ ಮಾಡಿ ಮಕ್ಕಳ ಎದೆ ಮೇಲೆ ಉಜ್ಜಿದರೆ ಅಯಾಸ, ಕೆಮ್ಮಿನಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ.ತಲೆ ಹೊಟ್ಟು ಇದ್ದಲ್ಲಿ ಬೇಕಾಗುವಷ್ಟು ವೀಳ್ಯದೆಲೆಯನ್ನು ನುಣ್ಣಗೆ ಅರೆದು ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರ ಮಾಡಿ. ಇದಕ್ಕೆ ಅರ್ಧ ಲಿಂಬೆರಸ ಬೆರೆಸಿ ತಲೆಯ ಪ್ರತಿಯೊಂದು ಭಾಗಕ್ಕೆ ಪೇಸ್ಟ್ ತರ ಹೆಚ್ಚಿಡಿ.

ಅರ್ಧಗಂಟೆ ಬಳಿಕ ಸ್ನಾನ ಮಾಡಿದರೆ ತಲೆಯ ಹೊಟ್ಟು ಮತ್ತು ಕೂದಲು ಉದುರುವುದು ಕಡಿಮೆಯಾಗುತ್ತದೆ.ವೀಳ್ಯದೆಲೆಯನ್ನು ಅರೆದು ತೆಗೆದ ರಸವನ್ನು ಗಾಯಗಳಿಗೆ ಹಚ್ಚಿದರೆ ಗಾಯಗಳು ಶೀಘ್ರ ಗುಣವಾಗುತ್ತದೆ.ಒಂದು ವೀಳ್ಯದೆಲೆ, ಸ್ವಲ್ಪ ತುಳಸಿ ಹಾಗೂ ಒಂದು ಲವಂಗವನ್ನು ಅರೆದು ದಿನಕ್ಕೆ 2 ಬಾರಿ ಸೇವಿಸಿದರೆ ಕೆಮ್ಮು ಕಡಿಮೆಯಾಗುವುದು.ವೀಳ್ಯದೆಲೆಗಳನ್ನು ಕತ್ತರಿಸಿ ನೀರಿನಲ್ಲಿ ಹಾಕಿ ಕುದಿಸಿ ಬಳಿಕ ಸೋಸಿ ಈ ಕಷಾಯಕ್ಕೆ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಿದರೆ ವಸಡಿನ ನೋವು ಊತ ಗುಣವಾಗುತ್ತದೆ.ಉಸಿರಾಟದ ತೊಂದರೆ ಇರುವವರು ವೀಳ್ಯದೆಲೆ ರಸ, ಈರುಳ್ಳಿ ರಸ, ಶುಂಠಿ ರಸ ಹಾಗೂ ಜೇನು ತುಪ್ಪ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸಿ ಇದನ್ನು ಸುಮಾರು 4-5 ತಿಂಗಳು ತೆಗೆದುಕೊಳ್ಳುತ್ತಾ ಬಂದರೆ ಉಸಿರಾಟದ ತೊಂದರೆ ಅತೀ ಬೇಗನೆ ವಾಸಿಯಾಗುವುದು.

ಒಂದೆರೆಡು ಚಮಚ ವೀಳ್ಯದೆಲೆ ರಸಕ್ಕೆ ಸ್ವಲ್ಪ ಜೇನು ತುಪ್ಪ ಬೆರೆಸಿ ದಿನಕ್ಕೆ 3 ಬಾರಿ ಸೇವಿಸುತ್ತಾ ಬಂದರೆ ಶ್ವಾಸಕೋಶಕ್ಕೆ ಸಂಬಂಧಿಸಿ ರೋಗಗಳು ನಿವಾರಣೆಯಾಗುವುದು.ವೀಳ್ಯದೆಲೆಗೆ ಉಪ್ಪು ಹಾಕಿಕೊಂಡು ಅಗಿದು ರಸವನ್ನು ನುಂಗುತ್ತಿದ್ದರೆ ಹೊಟ್ಟೆನೋವು ಕಡಿಮೆಯಾಗುವುದು.ಕ್ಯಾಲ್ಸಿಯಂ ಅಂಶ ಹೆಚ್ಚಿರುವ ವೀಳ್ಯದೆಲೆ ತಿನ್ನುವುದರಿಂದ ಜೀರ್ಣ ಶಕ್ತಿ ಹೆಚ್ಚಿಸಿ, ಧ್ವನಿ ಸರಿಪಡಿಸಿ,ಗ್ಯಾಸ್ಟ್ರಿಕ್ ಟ್ರಬಲ್‌ವನ್ನು ಬಹುಮಟ್ಟಿಗೆ ಗುಣಪಡಿಸುತ್ತದೆ.ಸಂದಿಗಳಲ್ಲಿ ಗಂಟು ನೋವು ಕಾಣಿಸಿಕೊಂಡಾಗ 2 ವೀಳ್ಯದೆಲೆಯನ್ನು ಸ್ವಲ್ಪ ಮಂದ ಜ್ವಾಲೆಯಲ್ಲಿ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಸಾಸಿವೆ ಎಣ್ಣೆ ಹಚ್ಚಿ ಅದರೊಳಗೆ ಎಣ್ಣೆ ಮಿಶ್ರಿತ ಬಿಸಿ ಮಾಡಿದ ಅರಸಿನ ಹುಡಿಯನ್ನು ದಪ್ಪಗೆ ಸವರಿ ಒಂದರ ಮೇಲೆ ಒಂದು ಎಲೆಯನ್ನು ಮುಚ್ಚಿ ಗಂಟುಗಳ ಮೇಲಿಟ್ಟು ಶಾಖ ಕೊಡಿ. ಹೀಗೆ ಒಂದೆರಡು ಬಾರಿ ಬಿಸಿ ಮಾಡಿ ಪುನರಾವರ್ತಿಸಿ ಬಟ್ಟೆಯಿಂದ ಸುತ್ತಿ ಕಟ್ಟಿ. ಹೀಗೆ ಇದನ್ನು 4-5 ತಿಂಗಳು ಮಾಡುತ್ತಾ ಬಂದರೆ ಗಂಟುನೋವು ಕಡಿಮೆಯಾಗುವುದು.

Comments (0)
Add Comment