ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಡಿ.8-12ರವರೆಗೆ ಲಕ್ಷದೀಪೋತ್ಸವದ ಸಂಭ್ರಮ – ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನ

ಬೆಳ್ತಂಗಡಿ: ನಾಡಿನ ಪವಿತ್ರಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಸಂಭ್ರಮದ ಲಕ್ಷದೀಪೋತ್ಸವವು ಡಿಸೆಂಬರ್ 8 ರಿಂದ 12ರವರೆಗೆ ನಡೆಯಲಿದೆ. ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಾನದಲ್ಲಿ ಲಕ್ಷದೀಪೋತ್ಸವದ ಸಂಭ್ರಮದ ವಿಶೇಷ ಉತ್ಸವಗಳು ನಡೆಯಲಿದೆ. ಜೊತೆಗೆ 91ನೇ ಸರ್ವಧರ್ಮ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಡಿ. 8ರಂದು ಹೊಸಕಟ್ಟೆ ಉತ್ಸವ, ಡಿ. 9ರಂದು ಕೆರೆಕಟ್ಟೆ ಉತ್ಸವ, ಡಿ.10ರಂದು ಲಲಿತೋದ್ಯಾನ ಉತ್ಸವ ಡಿ.11ರಂದು ಕಂಚಿಮಾರುಕಟ್ಟೆ ಉತ್ಸವ, ಡಿ.12ರಂದು ಗೌರಿಮಾರುಕಟ್ಟೆ ಉತ್ಸವ ನಡೆಯಲಿದೆ. ಡಿ.13ರಂದು ಸಂಜೆ 7ರಿಂದ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಆವರಣದಲ್ಲಿ ಸಮವಸರಣ ಪೂಜೆ ನಡೆಯಲಿದೆ. ಡಿ.8ರಂದು ಬೆಳಗ್ಗೆ 10.30ಕ್ಕೆ ವಸ್ತು ಪ್ರದರ್ಶನ ಮಂಟಪದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನವನ್ನು ಪುತ್ತೂರಿನ ಸಹಾಯಕ ಆಯುಕ್ತ ಗಿರೀಶ್ ನಂದನ್ ಎಂ. ಉದ್ಘಾಟಿಸಿಲಿದ್ದಾರೆ. ದಿನವೂ ಸಂಜೆ ವಸ್ತುಪ್ರದರ್ಶನ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಡಿ.11ರಂದು ಸೋಮವಾರ ಸಂಜೆ 5ಗಂಟೆಗೆ ಸರ್ವಧರ್ಮ ಸಮ್ಮೇಳನದ 91ನೇ ಅಧಿವೇಶನವನ್ನು ಖ್ಯಾತ ವಿದ್ವಾಂಸ ಬೆಂಗಳೂರಿನ ಡಾ. ಗುರುರಾಜ ಕರ್ಜಗಿಯವರು ಉದ್ಘಾಟಿಸುವರು. ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯವಾದಿ ಡಾ. ಎಂ. ಆರ್. ವೆಂಕಟೇಶ್, ಬೆಂಗಳೂರಿನ ವಿಭು ಅಕಾಡೆಮಿ ಮುಖ್ಯಸ್ಥ ವಿಜಯಪುರದ ಮಹಮ್ಮದ್ ಗೌಸ್ ಹವಾಲ್ದಾರ ಧಾರ್ಮಿಕ ಉಪನ್ಯಾಸ ನೀಡುವರು. ರಾತ್ರಿ ಗಂಟೆ 8.30ರಿಂದ ಬೆಂಗಳೂರಿನ ಅನುರಾಧಾ ವಿಕ್ರಾಂತ್ ಮತ್ತು ಬಳಗದವರಿಂದ ನೃತ್ಯ ಪ್ರದರ್ಶನವಿದೆ. ಡಿ.12ರಂದು ಸಂಜೆ 5 ಗಂಟೆಗೆ ಸಾಹಿತ್ಯ ಸಮ್ಮೇಳನದ 91ನೇ ಅಧಿವೇಶನವನ್ನು ಬೆಂಗಳೂರಿನ ಇಸ್ರೋದ ಅಧ್ಯಕ್ಷ ಡಾ. ಎಸ್. ಸೋಮನಾಥ್ ಉದ್ಘಾಟಿಸುವರು. ಬೆಂಗಳೂರಿನ ಖ್ಯಾತ ಗಮಕಿ ಡಾ.ಎ.ವಿ. ಪ್ರಸನ್ನ ಅಧ್ಯಕ್ಷತೆ ವಹಿಸುವರು. ಹೊನ್ನಾವರದ ನಿವೃತ್ತ ಉಪನ್ಯಾಸಕ ಡಾ. ಶ್ರೀಪಾದ ಶೆಟ್ಟಿ, ಬೆಂಗಳೂರಿನ ರಂಗಕರ್ಮಿ ಪ್ರಕಾಶ್ ಬೆಳವಡಿ ಮತ್ತು ಬಂಟ್ವಾಳದ ಡಾ. ಅಜಕ್ಕಳ ಗಿರೀಶ್ ಭಟ್ ಉಪನ್ಯಾಸ ನೀಡುವರು. ರಾತ್ರಿ 8.30ರಿಂದ ಬೆಂಗಳೂರಿನ ಜತಿನ್ ನೃತ್ಯ ಅಕಾಡೆಮಿಯ ವಿದುಷಿ ಅರ್ಚನಾ ಪುಣ್ಯೇಶ್ ಮತ್ತು ಬಳಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಡಿ.10ರಂದು ಸಂಜೆ 7 ರಿಂದ ರಾತ್ರಿ 10ಗಂಟೆಯವರೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಬಳಗದವರಿಂದ ಗಾನ, ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. ಈ ಐದು ದಿನಗಳಲ್ಲಿ ನಾಡಿನೆಲ್ಲೆಡೆಯಿಂದ ಲಕ್ಷಕ್ಕೂ ಅಧಿಕ ಭಕ್ತಾದಿಗಳು ಧರ್ಮಸ್ಥಳಕ್ಕೆ ಆಗಮಿಸಿ ಈ ಪುಣ್ಯಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಲಕ್ಷದೀಪೋತ್ಸವದ ಹಿನ್ನೆಲೆಯಲ್ಲಿ ಕೆ.ಎಸ್.ಆರ್.ಟಿ.ಸಿ. ರಾಜ್ಯದ ವಿವಿಧ ಭಾಗಗಳಿಂದ ಧರ್ಮಸ್ಥಳಕ್ಕೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ.

Comments (0)
Add Comment