ಸಂಸತ್ತಿನಲ್ಲಿ ಅಶಿಸ್ತಿನ ವರ್ತನೆ: ಲೋಕಸಭೆಯ 14 ಸಂಸದರು ಅಮಾನತು

ನವದೆಹಲಿ: ಸಂಸತ್ತಿನಲ್ಲಿ ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ ರಾಜ್ಯಸಭೆಯ ಒಬ್ಬರು ಸದಸ್ಯರು ಹಾಗೂ ಲೋಕಸಭೆಯ 14 ಸಂಸದರನ್ನು ಅಮಾನತುಗೊಳಿಸಲಾಗಿದೆ. ಮಾಣಿಕಂ ಠಾಗೋರ್, ಕನಿಮೋಳಿ, ಪಿ.ಆರ್ ನಟರಾಜನ್, ವಿ.ಕೆ ಶ್ರೀಕಾಂತಂ, ಬೇನಿ ಬಹನ್, ಕೆ ಸುಬ್ರಹ್ಮಣ್ಯಂ, ಎಸ್‌.ಆರ್ ಪ್ರತಿಬನ್, ಎಸ್ ವೆಂಕಟೇಶನ್ ಮತ್ತು ಮೊಹಮ್ಮದ್ ಜಾವೇದ್, ಟಿ.ಎನ್ ಪ್ರತಾಪನ್, ಹೈಬಿ ಈಡನ್, ಜ್ಯೋತಿಮಣಿ, ರಮ್ಯಾ ಹರಿದಾಸ್ ಮತ್ತು ಡೀನ್ ಕುರಿಯಾಕೋಸ್ ಅಮಾನತುಗೊಂಡ ಸಂಸದರು.

ಇದಕ್ಕೂ ಮುನ್ನವೇ ಲೋಕಸಭೆಯು ಐವರು ಕಾಂಗ್ರೆಸ್‌ ಸಂಸದರನ್ನು ಉಳಿದ ಅವಧಿಗೆ ಅಮಾನತುಗೊಳಿಸುವ ನಿರ್ಣಯ ಅಂಗೀಕರಿಸಿತ್ತು. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಐವರನ್ನು ಅಮಾನತುಗೊಳಿಸುವ ನಿರ್ಣಯ ಮಂಡಿಸಿದರು.

ಸದನದಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಪ್ರತಿಪಕ್ಷಗಳ 15 ಸದಸ್ಯರನ್ನು ಅಧಿವೇಶನದ ಉಳಿದ ಅವಧಿಯಿಂದ ಅಮಾನತುಗೊಳಿಸುವ ನಿರ್ಣಯ ತೆಗೆದುಕೊಳ್ಳಲಾಯಿತು. 15 ಸದಸ್ಯರ ಪೈಕಿ ಐವರು ಕಾಂಗ್ರೆಸ್‌ ಸಂಸದರಾಗಿದ್ದಾರೆ. ಸಂಸತ್ತಿನಲ್ಲಿ ಆದ ಭದ್ರತಾ ಲೋಪವನ್ನು ಖಂಡಿಸಿ ಪ್ರತಿಪಕ್ಷದ ಸದಸ್ಯರು ಗದ್ದಲ ಎಬ್ಬಿಸಿದ್ದರು. ಇದರಿಂದ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

Comments (0)
Add Comment