‘ಸಚಿವ ಸುಧಾಕರ್ ವಿರುದ್ಧ ಸುಳ್ಳು ಕೇಸ್ ದಾಖಲು, ರಾಜೀನಾಮೆಯ ಅಗತ್ಯವಿಲ್ಲ’-ಡಿ.ಕೆ. ಶಿವಕುಮಾರ್

ಬೆಂಗಳೂರು:“ಸಚಿವ ಸುಧಾಕರ್ ಅವರ ವಿರುದ್ಧ ದಾಖಲಾಗಿರುವ ದೂರು ಸಿವಿಲ್ ಪ್ರಕರಣ. ಧಮಕಿಗೂ ಪಿಸಿಆರ್ ದೂರಿಗೂ ಬಹಳ ವ್ಯತ್ಯಾಸವಿದೆ. ಈ ವಿಚಾರವಾಗಿ ನಾನು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಇದೊಂದು ಸುಳ್ಳು ಕೇಸ್ ಎಂದು ತಿಳಿದು ಬಂದಿದೆ. ಹೀಗಾಗಿ ಸುಧಾಕರ್ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು“ಬಿಜೆಪಿ ಏನಾದರೂ ಕುತಂತ್ರ ಮಾಡಲಿ. ಡಿ. ಸುಧಾಕರ್ ಅವರದು ಸಿವಿಲ್ ಪ್ರಕರಣವಾಗಿದೆ. ಪಕ್ಷದ ಅಧ್ಯಕ್ಷನಾಗಿ ನಾನು ಪ್ರಕರಣದ ಬಗ್ಗೆ ಸಂಪೂರ್ಣ ವರದಿ ಪಡೆದಿದ್ದೇನೆ. ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇನೆ. ಸುಧಾಕರ್ ಅವರು ಅನುಮತಿ ಮೇರೆಗೆ ಖಾಸಗಿ ಜಮೀನು ಖರೀದಿ ಮಾಡಿದ್ದಾರೆ. ಚುನಾವಣೆ ಸಮಯದಲ್ಲಿ ಬೇರೆಯವರು ಕಾಂಪೌಂಡ್ ಹಾಕಿದ್ದಾರೆ. ಹೀಗಾಗಿ ಇವರ ಕಡೆಯವರು ಜಾಗ ಭದ್ರ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ವಿಚಾರವಾಗಿ ಪರಿಶಿಷ್ಟ ಜಾತಿಯವರು ದೂರು ನೀಡಿದ್ದು, ಪಿಸಿಆರ್ ಪ್ರಕಾರ ದೂರು ದಾಖಲಿಸಲಾಗಿದೆ.

ಈ ದೂರು ನೀಡುವ ಸಂದರ್ಭದಲ್ಲಿ ಸುಧಾಕರ್ ಅವರು ಚಿತ್ರದುರ್ಗದಲ್ಲಿ ಇದ್ದರು. ಹೀಗಾಗಿ ಇದು ಸುಳ್ಳು ಕೇಸು ಎಂದು ನನಗೆ ಗೊತ್ತಿದೆ. ಎಲ್ಲ ಮಾಹಿತಿ ನಮ್ಮ ಬಳಿ ಇದೆ. ನಾಳೆ ಬೆಳಗ್ಗೆ ನನ್ನ ಮೇಲೂ ಸುಳ್ಳು ದೂರು ನೀಡಬಹುದು. ಬಿಜೆಪಿಯವರು ಸುಧಾಕರ್ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಕನಸು ಕಾಣುವ ಅಗತ್ಯವಿಲ್ಲ. ಯಾರಾದರೂ ತಪ್ಪು ಮಾಡಿದ್ದರೆ, ಕಾನೂನು ಮುಂದೆ ಯಾರೂ ದೊಡ್ಡವರಿಲ್ಲ. ಕಾನೂನಿಗೆ ಎಲ್ಲರೂ ಗೌರವ ನೀಡಬೇಕು.”

ಒಂದು ನಿಮಿಷದ ವಿಡಿಯೋ ವಿಚಾರವಾಗಿ ಕೇಳಿದ ಪ್ರಶ್ನೆಗೆ, “ಧಮಕಿ ಪ್ರಕರಣಕ್ಕೂ ಪಿಸಿಆರ್ ಪ್ರಕರಣಕ್ಕೂ ಬಹಳ ವ್ಯತ್ಯಾಸವಿದೆ” ಎಂದು ಹೇಳಿದರು.

Comments (0)
Add Comment