‘ಸಿದ್ದರಾಮಯ್ಯ ರೈತರ ಹಿತ ರಕ್ಷಣೆ ಮಾಡುತ್ತಿಲ್ಲ, ಕುರ್ಚಿ ರಕ್ಷಣೆ ಮಾಡುತ್ತಿದ್ದಾರೆ’- ಕಟೀಲ್‌

ವಿಜಯಪುರ: ಎರಡು ಬಾರಿ ಮುಖ್ಯಮಂತ್ರಿಯಾದರೂ ಸಿದ್ದರಾಮಯ್ಯ ಅವರಿಗೆ ಆಡಳಿತ ನಡೆಸಲು ಬರುತ್ತಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನ ನಡೆದಿದೆಯೇ ಹೊರತು, ರೈತರ ಹಿತ ಕಾಪಾಡಾಲು ಯೋಚಿಸುತ್ತಿಲ್ಲ ಎಂದು ಹೇಳಿದ್ದಾರೆ.  ಸಮರ್ಪಕವಾಗಿ ವಿದ್ಯುತ್ ನೀಡದ ಕಾರಣ ಪೂರ್ಣ ಪ್ರಮಾಣದಲ್ಲಿ ಕೃಷಿ ನಷ್ಟವಾಗಿದೆ. ಸಿದ್ದರಾಮಯ್ಯ ರಾಜಕಾರಣ ಮಾಡುತ್ತಿದ್ದಾರೆ. ರೈತರ ಹಿತ ರಕ್ಷಣೆ ಮಾಡುತ್ತಿಲ್ಲ, ಕುರ್ಚಿ ರಕ್ಷಣೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅತಿವೃಷ್ಠಿ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಪರಿಹಾರ ಹಣಕ್ಕೆ ಕಾಯದೇ, ಎನ್ ಡಿಆರ್ ಎಫ್ ಮಾರ್ಗಸೂಚಿ ಮೀರಿ ತಕ್ಷಣ ಸಂತ್ರಸ್ತ ರೈತರಿಗೆ ರೈತರಿಗೆ ಪರಿಹಾರ ಕೊಟ್ಟಿದ್ದರು. ಸಿದ್ದರಾಮಯ್ಯ ನವರು ಕೂಡ ರೈತರಿಗೆ ಸೂಕ್ತ ಪರಿಹಾರ ತಕ್ಷಣವೇ ಒದಗಿಸಬೇಕು ಎಂದು ಒತ್ತಾಯಿಸಿದರು.

ಸಚಿವರು ಇದುವರೆಗೂ ರೈತರ ಆಹವಾಲು ಆಲಿಸಿಲ್ಲ. ಪ್ರಭಾವಿ ಸಚಿವರ ಕ್ಷೇತ್ರವಾದ ತಿಕೋಟವನ್ನೇ ಬರ ಪೀಡಿತ ಎಂದು ಘೋಷಣೆ ಮಾಡುವ ಯೋಗ್ಯತೆ ಇಲ್ಲ. ಅಧಿಕಾರಿಗಳ, ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯದಿಂದ ತಿಕೋಟಾ ತಾಲ್ಲೂಕನ್ನು ಬರಗಾಲ ಪಟ್ಟಿಯಿಂದ ಹೊರಗಿಟ್ಟಿದ್ದಾರೆ. ಅಲ್ಲದೇ ಬರದಿಂದ ಇದುವರೆಗೆ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.

ಬರದ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಮಾಡಿಲ್ಲ. ಆದರೆ ರಾಜ್ಯ ಸರ್ಕಾರ ಬರದಿಂದ ಎಷ್ಟು ನಷ್ಟವಾಗಿದೆ ಎಂಬ ಬಗ್ಗೆ ಇನ್ನೂ ವರದಿ ಕೊಟ್ಟಿಲ್ಲ ಎಂದು ದೂರಿದರು.

 

Comments (0)
Add Comment