ಹಮಾಸ್ ಉಗ್ರರ ಬೆನ್ನಲ್ಲೇ ಎರಡು ದೇಶಗಳ ಉಗ್ರ ಪಡೆಗಳಿಂದ ಸವಾಲು – ಉತ್ತರ ಇಸ್ರೇಲ್ ಮೇಲೆ ಲೆಬೆನಾನ್ ಸಿರಿಯಾ ದಾಳಿ

ಟೆಲ್ ಅವಿವ್: ಹಮಾಸ್ ಉಗ್ರರ ಮೇಲಿನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಇಸ್ರೇಲ್ ಪ್ರತಿಜ್ಞೆ ಕೈಗೊಂಡಿದೆ. ಆದರೆ, ಇಸ್ರೇಲ್ ಸೇನೆಗೆ ಮತ್ತೆ ಎರಡು ಪಡೆಗಳಿಂದ ಸವಾಲು ಎದುರಾಗಿದೆ. ಸಿರಿಯಾ ಹಾಗೂ ಲೆಬನಾನ್ ದೇಶಗಳು ಇಸ್ರೇಲ್ ವಿರುದ್ಧ ರಣರಂಗಕ್ಕೆ ಇಳಿದಿದ್ದು, ಉತ್ತರ ಇಸ್ರೇಲ್ ಮೇಲೆ ದಾಳಿ ಮಾಡಿವೆ. ಪ್ಯಾಲೆಸ್ಟೀನ್ ಜನರ ಪರ ‘ಬೆಂಬಲ’ವನ್ನು ಪ್ರದರ್ಶಿಸಲು ಲೆಬೆನಾನ್‌ನ ಶಿಯಾ ಇಸ್ಲಾಮಿಸ್ಟ್ ಸಂಘಟನೆ ಹೆಜ್ಬೊಲ್ಲಾ ಕೂಡ ಇಸ್ರೇಲ್‌ನ ಟ್ಯಾಂಕ್ ಮೇಲೆ ಕ್ಷಿಪಣಿ ಉಡಾಯಿಸಿದೆ. ಇರಾನ್ ಬೆಂಬಲಿಗ ಗುಂಪಿಗೆ ಸೇರಿದ ವೀಕ್ಷಣಾ ನೆಲೆಯ ಮೇಲೆ ಇಸ್ರೇಲ್ ಪ್ರತಿದಾಳಿ ನಡೆಸಿದೆ. ಇತ್ತ, ಸಿರಿಯಾದಿಂದಲೂ ಇಸ್ರೇಲ್ ಸೇನೆ ದಾಳಿಯನ್ನು ಎದುರಿಸುತ್ತಿದೆ. ಸಿರಿಯಾ ಆರ್ಟಿಲರಿಗಳನ್ನು ಉಡಾಯಿಸಿದೆ. ಇದರಿಂದ ಯುದ್ಧಕ್ಕೆ ಮತ್ತೊಂದು ಪಡೆ ಸೇರಿಕೊಂಡಿದೆ. ಸಿರಿಯಾದಿಂದ ಉಡಾವಣೆಯಾಗುತ್ತಿರುವ ಆರ್ಟಿಲರಿ ಹಾಗೂ ಮೋರ್ಟಾರ್ ಶೆಲ್‌ಗಳ ಕಡೆಗೆ ಸೈನಿಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿಕೆ ನೀಡಿದೆ. ಸಿರಿಯಾ ನೆಲೆಯಿಂದ ಇಸ್ರೇಲ್ ಕಡೆ ಅನೇಕ ರಾಕೆಟ್ ದಾಳಿಗಳು ನಡೆದಿವೆ.

Comments (0)
Add Comment