ಹಾಲಿ ಭಾವಿ ಸಿಎಂಗಳನ್ನೇ ಪರಾಜಯಗೊಳಿಸಿದ ವೆಂಕಟರಮಣ ರೆಡ್ಡಿ – ತೆಲಂಗಾಣದಲ್ಲಿ ಇತಿಹಾಸ ಸೃಷ್ಟಿಸಿದ ಕೇಸರಿ ನಾಯಕ

ಹೈದರಾಬಾದ್ :‌ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ನಾಲ್ಕು ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಮೂರು ರಾಜ್ಯಗಳನ್ನು ಗೆದ್ದು ಬೀಗಿದರೆ, ಕಾಂಗ್ರೆಸ್ ಪಕ್ಷ ತೆಲಂಗಾಣವನ್ನು ತನ್ನ ವಶ ಮಾಡಿಕೊಂಡಿದೆ. ಇನ್ನು, ತೆಲಂಗಾಣದಲ್ಲಿ ಬಿಆರ್‌ಎಸ್ ಹಾಗೂ ಕಾಂಗ್ರೆಸ್ ನಡುವೆ ಭಾರಿ ಪೈಪೋಟಿ ನಡೆದಿತ್ತು. ಈ ಪೈಪೋಟಿ ನಡುವೆ ಕಾಂಗ್ರೆಸ್ ಪಕ್ಷ ತೆಲಂಗಾಣದಲ್ಲಿ ಗೆದ್ದು ಬೀಗಿದೆ. ಇದೆಲ್ಲದರ ನಡುವೆ ತೆಲಂಗಾಣದಲ್ಲಿ ಬಲಿಷ್ಠರನ್ನು ಸೋಲಿಸುವ ಮೂಲಕ ಬಿಜೆಪಿಯ ಕೆ. ವೆಂಕಟರಮಣ ರೆಡ್ಡಿ ಅಚ್ಚರಿ ಮೂಡಿಸಿದ್ದಾರೆ. ಇವರು ಹಾಲಿ ಮುಖ್ಯಮಂತ್ರಿ, ಬಿಆರ್‌ಎಸ್‌ನ ಕೆ. ಚಂದ್ರಶೇಖರ್‌ ರಾವ್‌ ಹಾಗೂ ಭಾವಿ ಸಿಎಂ ಎಂದೇ ಹೇಳಲಾಗುತ್ತಿರುವ ಕಾಂಗ್ರೆಸ್‌ನ ರೇವಂತ್‌ ರೆಡ್ಡಿ ಅವರನ್ನು ಸೋಲಿಸುವ ಮೂಲಕ ಸುದ್ದಿಯಾಗಿದ್ದಾರೆ. ಕೆವಿಆರ್‌ ಎಂದೇ ಖ್ಯಾತಿಯಾಗಿರುವ ಕಾಟಿಪಳ್ಳಿ ವೆಂಕಟರಮಣ ರೆಡ್ಡಿ, ಕಾಮರೆಡ್ಡಿ ವಿಧಾನಸಭೆ ಕ್ಷೇತ್ರದ ನಾಯಕರಾಗಿದ್ದಾರೆ. ಕೆ. ಚಂದ್ರಶೇಖರ್‌ ರಾವ್‌ ಅವರ ತೆಲಂಗಾಣ ರಾಷ್ಟ್ರ ಸಮಿತಿ (ಈಗ ಬಿಆರ್‌ಎಸ್)‌ ಪಕ್ಷದಲ್ಲಿದ್ದ ಇವರು ಬಳಿಕ ಬಿಜೆಪಿ ಸೇರಿದ್ದರು. ಉದ್ಯಮಿಯಾಗಿದ್ದ ಇವರು ರಾಜಕೀಯ ಪ್ರವೇಶಿಸಿ, ಟಿಆರ್‌ಎಸ್‌ ಬಿಟ್ಟು, ಬಿಜೆಪಿ ಸೇರಿ ಈಗ ಇತಿಹಾಸ ಸೃಷ್ಟಿಸಿದ್ದಾರೆ. ಕೆ. ವೆಂಕಟರಮಣ ರೆಡ್ಡಿ ಕಾಮರೆಡ್ಡಿ ವಿಧಾನಸಭೆ ಕ್ಷೇತ್ರದಲ್ಲಿ ಕೆಸಿಆರ್‌ ಹಾಗೂ ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ರೇವಂತ್‌ ರೆಡ್ಡಿ ಅವರನ್ನು ಸೋಲಿಸಿದ್ದಾರೆ. ಇವರು ಕೆಸಿಆರ್‌ ಅವರಿಗಿಂತ 6,741 ಅಧಿಕ ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಅಲ್ಲದೆ, ಘಟಾನುಘಟಿಗಳನ್ನೇ ಸೋಲಿಸಿ ದೇಶಾದ್ಯಂತ ಸುದ್ದಿಯಾಗಿದ್ದಾರೆ.

Comments (0)
Add Comment