ಹೆತ್ತ ತಾಯಿಯನ್ನೇ ಮನೆಯಿಂದ ಹೊರದಬ್ಬಿದ ಮಕ್ಕಳು..!

ಹಾಸನ ; ಹೆತ್ತ ತಾಯಿಯನ್ನು ಮಕ್ಕಳು ಮನೆಯಿಂದ ಹೊರದಬ್ಬಿದ ನೋವಿನ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

ಬೇಲೂರು ತಾಲೂಕಿನ ಬೊಮ್ಮೇನಹಳ್ಳಿ ಗ್ರಾಮದ ಹೊನ್ನಮ್ಮ ಹನುಮೇಗೌಡ ಎಂಬ ವೃದ್ಧೆ ಮಕ್ಕಳ ನಿರ್ಲಕ್ಷ್ಯಕ್ಕೆ ಒಳಗಾಗಿ ಗುಡಿಸಲೊಂದರಲ್ಲಿ ಒಂದು ಹೊತ್ತಿನ ಅನ್ನಕ್ಕಾಗಿ ಪರದಾಡುವ ಸ್ಥಿತಿಯಲ್ಲಿದ್ದಾರೆ. ಆಕೆಯ ಹೆಸರಲ್ಲಿನಲ್ಲಿದ್ದ ಆಸ್ತಿಯನ್ನು ತಮ್ಮಿಬ್ಬರು ಮಕ್ಕಳು ಪಡೆದು ತಾಯಿಯ ಸಾಕುವಲ್ಲಿ ಹಿಂಜರಿದು ಎಲ್ಲಾ ವಿಚಾರದಲ್ಲೂ ಈ ವೃದ್ಧೆಯದ್ದೇ ತಪ್ಪೆಂದು ಬಿಂಬಿಸಿ ಬೇರೆಡೆ ವಾಸವಿದ್ದಾರೆ. ಇಳಿ ವಯಸ್ಸಿನ ಹಿರಿ ಜೀವದ ಸ್ಥಿತಿ ಕಂಡು ಮರುಗಿದ ಸುತ್ತಲಿನ ಜನರು ಆಕೆಯ ಊಟ, ಬಟ್ಟೆ ಆಸ್ಪತ್ರೆ ಖರ್ಚಿಗೆ ಸಹಾಯ ಮಾಡುತ್ತಿದ್ದಾರೆ, ಸುಮಾರು 80 ವರ್ಷ ವಯಸ್ಸಾಗಿರುವ ಹಿರಿ ಜೀವ ತನ್ನ ಯೌವ್ವನದಲ್ಲಿ ಮಕ್ಕಳಿಗಾಗಿ ಶ್ರಮವಹಿಸಿ ಅವರಿಗೆ ನೆಲೆ ಮಾಡಿಟ್ಟು, ಒಂದೊಳ್ಳೆ ಸಂಬಂಧ ಹಿಡಿದು ಮದುವೆ ಮಾಡಿಸಿ ಜಮೀನುನಲ್ಲಿ ಸಮಾನವಾಗಿ ಹಂಚಿದ ತಾಯಿಗೆ ಆಸರೆಯಾಗಬೇಕಾದ ಸಮಯದಲ್ಲಿ ಮಕ್ಕಳು ಮೀನಮೇಷ ಎಣಿಸಿ ಮನೆಯಿಂದ ಹೊರ ದಬ್ಬಿ ಅಮಾನವೀಯತೆ ಮೆರೆದಿದ್ದಾರೆ. ಮಕ್ಕಳ ಸುಖಕ್ಕೆ ಅಡ್ಡಿಯಾಗದೆ ತಾನೇ ಒಂದು ಗುಡಿಸಲಿನಲ್ಲಿ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ. ಬೀದಿಗೆ ಬಿದ್ದ ಇಳಿ ವಯಸ್ಸಿನ ವೃದ್ಧೆಯನ್ನು ಗ್ರಾಮಸ್ಥರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ತಹಶಿಲ್ದಾರ್ ಮಮತಾ ಎಂ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾಂತ್ವನ ಹೇಳಿದ್ದಾರೆ. ಆಕೆಯ ಮಕ್ಕಳ ಕರೆಸಿ ತರಾಟೆ ತೆಗೆದುಕೊಂಡ ಅವರು, ಇಳಿ ವಯಸ್ಸಿನ ತಾಯಿಗೆ ನೆರವಾಗದೆ ಇರುವುದಕ್ಕೆ ಶಿಕ್ಷೆಗೆ ಒಳಪಡಿಸಲು ಕಾನೂನಿನಲ್ಲಿ ಅವಕಾಶವಿದೆ. ಮಕ್ಕಳಿಗಾಗಿ ಜೀವನವನ್ನೇ ತ್ಯಾಗ ಮಾಡಿದ ತಾಯಿಯನ್ನು ನಿರ್ಲಕ್ಷ್ಯ ಮಾಡಲು ಹೇಗೆ ಮನಸ್ಸು ಬರುತ್ತದೆ ಎಂದು ತರಾಟೆಗೆ ತಗೊಂಡಿದ್ದಾರೆ, ಸಮಾಜದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನವಿದೆ. ತನ್ನ ಮಕ್ಕಳು ಸುಖವಾಗಿರಲಿ ಎಂದು ಜೀವನವಿಡಿ ಶ್ರಮಿಸುವ ಯಾವ ತಾಯಿಗೂ ಇಂತಹ ಸ್ಥಿತಿ ಬರಬಾರದು. ಕೊನೆಗಳಿಗೆಯಲ್ಲಿ ಸಂತೋಷದಿಂದ ನೆಮ್ಮದಿಯಾಗಿ ಜೀವ ಬಿಟ್ಟರೆ ಅದೇ ಮಕ್ಕಳಿಗೆ ಆಶೀರ್ವಾದ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಎಂದ ಅವರು ವೃದ್ಧೆಗೆ ಸರ್ಕಾರದಿಂದ ದೊರಕಿಸಬಹುದಾದ ಪಿಂಚಣಿ ಮತ್ತು ಗೃಹ ಲಕ್ಷ್ಮಿ ಯೋಜನೆಯ ಸೌಲಭ್ಯದ ಬಗ್ಗೆ ಗಮನ ಹರಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಹಾಗೂ ವೃದ್ಧೆಯ ಯೋಗಕ್ಷೇಮ ವಿಚಾರಿಸುವಂತೆ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಸೂಚನೆ ನೀಡಿದರು.

Comments (0)
Add Comment